Whatsapp: ಭಾರತದಲ್ಲಿ 69 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸಾಪ್: ಕಾರಣ ಇಲ್ಲಿದೆ
ವಾಟ್ಸಾಪ್ (Whatsapp) ಬಳಕೆ ಮಾಡದೆ ಇರುವವರು ಯಾರಿದ್ದಾರೆ ಹೇಳಿ. ಇದು ಈಗ ಕೇವಲ ಮೆಸೆಜಿಂಗ್ ಆಪ್ ಮಾತ್ರ ಆಗಿರದೆ ಬಳಕೆದಾರರಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತಿದೆ. ಅಷ್ಟೇ ಯಾಕೆ ಬ್ಯಾಂಕಿಗ್ ವ್ಯವಹಾರವನ್ನೂ ಸಹ ಈ ಮೂಲಕ ಮಾಡಬಹುದಾಗಿದೆ. ಈ ನಡುವೆ ವಾಟ್ಸಾಪ್ ಭಾರತದಲ್ಲಿ 69 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ.
ಹೌದು, ಭಾರತದಲ್ಲಿ ಬಹುಪಾಲು ಜನರು ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ಆದರೆ ವಾಟ್ಸಾಪ್ ಎಲ್ಲಾ ಬಳಕೆದಾರರಿಗೂ ಉತ್ತಮ ಭದ್ರತೆ ನೀಡುವ ಹಿನ್ನೆಲೆ ಇತರೆ ಕಳ್ಳ ಖಾತೆಗಳ ವಿರುದ್ಧ ಸಮರ ಸಾರುತ್ತಲೇ ಬಂದಿದೆ. ಇದರ ಭಾಗವಾಗಿಯೇ ಈಗ ಬರೋಬ್ಬರಿ 69 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿ ದಾಖಲೆ ಬರೆದಿದೆ. ಹಾಗಿದ್ರೆ, ಈ ಖಾತೆಗಳನ್ನು ಬ್ಯಾನ್ ಮಾಡಲು ಕಾರಣವಾದ ಅಂಶಗಳು ಯಾವುವು?, ವಾಟ್ಸಾಪ್ ಸ್ವೀಕಾರ ಮಾಡಿದ ದೂರುಗಳ ಸಂಖ್ಯೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ವಾಟ್ಸಾಪ್ ಖಾತೆ ಬ್ಯಾನ್: ಹೊಸ ಐಟಿ ನಿಯಮಗಳು 2021 ರ ಅನುಸಾರವಾಗಿ ಡಿಸೆಂಬರ್ 2023 ರಲ್ಲಿ ಭಾರತದಲ್ಲಿ ದಾಖಲೆಯ 69 ಲಕ್ಷಕ್ಕೂ ಹೆಚ್ಚು ಕೆಟ್ಟ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿದೆ(WhatsApp account ban). ಅಂದರೆ ಡಿಸೆಂಬರ್ 1-31 ರ ನಡುವೆ, ಕಂಪನಿಯು 6,934,000 ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸಾಪ್ ಮಾಹಿತಿ ನೀಡಿದೆ. ಈ ನಡುವೆ ಸುಮಾರು 1,658,000 ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಡಿಸೆಂಬರ್‌ನಲ್ಲಿ ದೇಶದಲ್ಲಿ ಮತ್ತೊಂದು ದಾಖಲೆಯ 16,366 ದೂರು ವರದಿಗಳನ್ನು ಸ್ವೀಕಾರ ಮಾಡಿದ್ದು, ಈ ದೂರುಗಳನ್ನು ಆಧಾರಿಸಿಕೊಂಡು ಕಳ್ಳ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕ್ರಮ ನಿರಂತರವಾಗಿ ಪ್ರತಿ ತಿಂಗಳು ನಡೆಯುತ್ತಿದೆ.

ಇನ್ನು ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್ ತೆಗೆದುಕೊಂಡ ಅನುಗುಣವಾದ ಕ್ರಮವನ್ನು ಹೊಂದಿದೆ, ಜೊತೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿನ ದುರ್ಬಳಕೆಯನ್ನು ಎದುರಿಸಲು ವಾಟ್ಸಾಪ್ ನ ಸ್ವಂತ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ ಎಂದು ವಾಟ್ಸಾಪ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಈ ಮೂಲಕ ಬಳಕೆದಾರರಿಗೆ ಇನ್ನಷ್ಟು ಭದ್ರತೆ ನೀಡುವ ಬಗ್ಗೆ ಉಚ್ಚರಿಸಿದೆ. .
ಈ ಖಾತೆಗಳನ್ನು ಯಾಕೆ ಬ್ಯಾನ್ ಮಾಡಲಾಗುತ್ತದೆ?: ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸಶಕ್ತಗೊಳಿಸುವ ಪ್ರಯತ್ನದಲ್ಲಿ, ಕೇಂದ್ರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿ (GAC) ಅನ್ನು ಆರಂಭ ಮಾಡಿದೆ. ಈ ಮೂಲಕ ಕಂಟೆಂಟ್ ಮತ್ತು ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಳಕೆದಾರರ ಕಾಳಜಿಯನ್ನು ಪರಿಶೀಲನೆ ನಡೆಸುವ ವಾಟ್ಸಾಪ್ ಯಾವೆಲ್ಲಾ ಖಾತೆಗಳು ಕೆಟ್ಟ ಉದ್ದೇಶಹೊಂದಿವೆ ಅನ್ನೋದನ್ನು ಕಂಡುಕೊಂಡು ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಿಕೊಂಡು ಬರುತ್ತಿದೆ. ಅದಂತೆ ಮೆಸೆಜಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ.

ದುರುಪಯೋಗವನ್ನು ತಡೆಗಟ್ಟುವಲ್ಲಿ ಮತ್ತು ಎದುರಿಸುವಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಮೆಸೆಜ್ ಸೇವೆಗಳಲ್ಲಿ ನಾವು ಉದ್ಯಮದ ನಾಯಕರಾಗಿದ್ದೇವೆ. ನಮ್ಮ ಸುರಕ್ಷತಾ ಫೀಚರ್ಸ್ ಮತ್ತು ಕಂಟ್ರೋಲ್ ಜೊತೆಗೆ, ಈ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ನಾವು ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ಜಾರಿ, ಆನ್‌ಲೈನ್ ಸುರಕ್ಷತೆ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ತಜ್ಞರ ತಂಡವನ್ನು ನೇಮಿಸಿಕೊಳ್ಳುತ್ತೇವೆ ಎಂದು ಈ ವಿಷಯಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ತನ್ನ ಜವಬ್ದಾರಿಯನ್ನು ಒತ್ತಿ ಹೇಳಿದೆ. ಅದರಂತೆ ನವೆಂಬರ್ ತಿಂಗಳಲ್ಲಿ ವಾಟ್ಸಾಪ್ ದೇಶದಲ್ಲಿ 71 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧ ಮಾಡಲಾಗಿತ್ತು.


Click it and Unblock the Notifications








