ಬೆಳಗ್ಗೆ ಎದ್ದ ರೈತನಿಗೆ ಬೆಳೆಗಳ ಬೆಲೆ ತಿಳಿಸುತ್ತದೆ 'ವಾಟ್ಸ್ಆಪ್'!
ತಂತ್ರಜ್ಞಾನದ ಸದ್ಬಳಕೆಯಿಂದ ರೈತರಿಗೂ ಲಾಭ ಮಾಡಿಕೊಡಬಹುದು ಎಂದು ರಾಮನಗರ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ. ಕೃಷಿ ಮಾಹಿತಿಗಳಿಗಾಗಿ ರೈತರು ಸರ್ಕಾರಿ ಕಚೇರಿ ಅಲೆಯದಂತೆ, ಅಗತ್ಯ ಮಾಹಿತಿಗಳು ನೇರವಾಗಿ ರೈತರ ಮೊಬೈಲ್ ಸೇರುವಂತೆ ಮಾಡಲು ಅಧಿಕಾರಿಗಳು ವಾಟ್ಸ್ಆಪ್ ಗ್ರೂಪ್‌ಗಳ ಮೊರೆಹೋಗಿರುವುದು ಕಂಡುಬಂದಿದೆ.
ಹೌದು, ಕೃಷಿ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದ್ದು, ಇರುವ ಸಿಬ್ಬಂದಿ ಪ್ರತಿ ರೈತನ್ನೂ ತಲುಪಲು ಕಷ್ಟ. ಹಾಗಾಗಿ, ಪರ್ಯಾಯ ಮಾರ್ಗೋಪಾಯಗಳನ್ನು ಅನುಸರಿಸಲಾಗುತ್ತಿದೆ. ಇದರ ಒಂದು ಭಾಗವಾಗಿ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೃಷಿಚೇತನ ವಾಟ್ಸ್ಆಪ್ ಗ್ರೂಪ್‌ಗಳನ್ನು ರಚಿಸುವ ಮೂಲಕ ಕೃಷಿ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಲಾಗುತ್ತಿದೆ.

ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಬೆಳೆಗೆ ವಿಮೆ ಸೌಲಭ್ಯವಿದೆ?, ರೈತರು ಕಟ್ಟಬೇಕಾದ ಕಂತಿನ ಮೊತ್ತವೆಷ್ಟು? ಎಂಬ ಮಾಹಿತಿಗಳು ಸೇರಿದಂತೆ, ಬೆಳೆ ರಕ್ಷಣೆ, ಕೀಟಬಾಧೆಗೆ ಕೈಗೊಳ್ಳಬೇಕಾದ ಕ್ರಮಗಳು, ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಎಲ್ಲಾ ಮಾಹಿತಿಯನ್ನು ಈ ಗ್ರೂಪ್‌ಗಳ ಮೂಲಕವೇ ರವಾನಿಸಲಾಗುತ್ತಿದೆ.
ಜಿಲ್ಲೆಯಲ್ಲಿ 2017 ರಲ್ಲಿ ಈ ಕಾರ್ಯ ಪ್ರಾರಂಭವಾದರೂ ಇತ್ತೀಚಿಗೆ ರೈತರು ಹೆಚ್ಚು ಹೆಚ್ಚು ಒಡನಾಟವನ್ನು ಶುರುವಿಟ್ಟುಕೊಂಡಿದ್ದಾರೆ. ರಾಮನಗರ ಜಿಲ್ಲೆಯದಾಧ್ಯಂತ ಈಗಾಗಲೇ ಸಾವಿರಾರು ರೈತರು ಇದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಜಿಲ್ಲೆಯ ಒಂದೊಂದು ಹೋಬಳಿಯಲ್ಲೂ 10 ರಿಂದ 15 ಗುಂಪುಗಳನನ್ನು ಈಗಾಗಲೇ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ವಾಟ್ ಆಪ್ ಗ್ರೂಪ್ಗಳನ್ನು ರಚಿಸಿದ್ದಾರೆ. ಈ ಮೂಲಕ ರೈತರಿಗೆ ಬೇಕಾದ ಎಲ್ಲಾ ಕೃಷಿ ಮಾಹಿತಿ ಎಲ್ಲವನ್ನೂ ರವಾನಿಸಲಾಗುತ್ತಿದೆ. ರೈತರಿಗೆ ಅಂತರ್ಜಾಲ ಮಾಧ್ಯಮಗಳು ಸಹಾಯಕವಾಗಿರುವುದರಿಂದಇದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ಜಿ.ಎಚ್. ಯೋಗೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಓದಿರಿ: ಸ್ವಂತ ಮನೆ ಕನಸು ಕಂಡಿದ್ದ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಈತನ ಸಾಧನೆ ಅಮೋಘ!!


Click it and Unblock the Notifications








