ಈ ಬಳಕೆದಾರರಿಗೆ ಮಾತ್ರ ವಾಟ್ಸಾಪ್‌ನಿಂದ ಹೊಸ ಸೌಲಭ್ಯ; ಏನೆಂದು ತಿಳಿದುಕೊಳ್ಳಿ!
ವಾಟ್ಸಾಪ್ ಈಗಾಗಲೇ ಸಾಕು ಎನಿಸುವಷ್ಟು ಫೀಚರ್ಸ್‌ಗಳನ್ನು ಬಳಕೆದಾರರಿಗೆ ನೀಡಿದೆ. ಅದರಲ್ಲೂ ಇತ್ತೀಚೆಗೆ ಘೋಷಣೆ ಮಾಡಲಾದ ಸರ್ಚ್ ಬಾರ್ ಫೀಚರ್ಸ್, ಗ್ರೂಪ್ ಕಾಲ್ ಶೆಡ್ಯೂಲ್ ಫೀಚರ್ಸ್ ಬಹಳ ಅನುಕೂಲ ನೀಡಲಿದೆ. ಇದರ ಹೊರತಾಗಿ ಬಳಕೆದಾರರಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಮತ್ತೊಂದು ಫೀಚರ್ಸ್ ಬಗ್ಗೆ ಘೋಷಣೆ ಮಾಡಲಾಗಿದೆ.
ಹೌದು, ಸಾಮಾನ್ಯವಾಗಿ ಒಂದೇ ಮೊಬೈಲ್‌ನಲ್ಲಿ ಎರಡು ಆಪ್‌ಗಳನ್ನು ಬಳಕೆ ಮಾಡುವ ಅವಕಾಶ ಕಲ್ಪಿಸಿಲಾಗಿದ್ದು, ಈ ಮೂಲಕ ಮೊಬೈಲ್ ಬಳಕೆದಾರರು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದಾರೆ. ಅದೇ ರೀತಿ ಈಗ ಟ್ಯಾಬ್ಲೆಟ್‌ಗಳಲ್ಲಿ ವಾಟ್ಸಾಪ್ ಸ್ಪ್ಲಿಟ್ ವ್ಯೂ ಗೆ ಅವಕಾಶ ಮಾಡಿಕೊಡಲು ಮೆಟಾ ಮುಂದಾಗಿದೆ. ಹಾಗಿದ್ರೆ, ಈ ಸ್ಪ್ಲಿಟ್ ವ್ಯೂ ಅಂದರೆ ಏನು?, ಇದನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು?, ಎಂದಿನಿಂದ ಹಾಗೂ ಯಾರಿಗೆ ಈ ಸೇವೆ ಲಭ್ಯ ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ಏನಿದು ಸ್ಪ್ಲಿಟ್ ವ್ಯೂ?
ಸ್ಪ್ಲಿಟ್ ವ್ಯೂ ಎಂಬುದು ಸ್ಮಾರ್ಟ್‌ಡಿವೈಸ್ ಬಳಕೆದಾರರಿಗೆ ಅಗತ್ಯವಾಗಿರುವ ಒಂದು ಪ್ರಮುಖ ಫೀಚರ್ಸ್ ಆಗಿದ್ದು, ಒಮ್ಮೆಲೆ ಒಂದೇ ಡಿಸ್‌ಪ್ಲೇನಲ್ಲಿ ಎರಡು ಆಪ್ ಗಳನ್ನು ಓಪನ್ ಮಾಡಲು ಅವಕಾಶ ನೀಡುತ್ತದೆ. ಅದರಲ್ಲೂ ಈ ಸೌಲಭ್ಯ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿದ್ದು, ಆಯ್ದ ಆಪ್‌ಗಳು ಮಾತ್ರ ಈ ಸೇವೆಗೆ ಬೆಂಬಲ ನೀಡುತ್ತವೆ. ಇದರ ಸಾಲಿಗೆ ಈಗ ವಾಟ್ಸಾಪ್ ಸಹ ಸೇರಿಕೊಳ್ಳಲಿದೆ.
ವಾಟ್ಸಾಪ್ ಸ್ಪ್ಲಿಟ್ ವ್ಯೂ ಯಾರಿಗೆ ಲಭ್ಯ?
ಈ ಸ್ಪ್ಲಿಟ್ ವ್ಯೂ ಅನ್ನು ಸದ್ಯಕ್ಕೆ ಪರೀಕ್ಷಿಸಲಾಗುತ್ತಿದ್ದು, ಟ್ಯಾಬ್ಲೆಟ್‌ಗಳಿಗಾಗಿ ಆಂಡ್ರಾಯ್ಡ್ ಬೀಟಾದಲ್ಲಿ ಇದನ್ನು ಹೊರತರಲು ಯೋಜಿಸಲಾಗುತ್ತಿದೆ. ಈ ಮೂಲಕ ಯಾರೆಲ್ಲಾ ಬಳಕೆದಾರರು ಟ್ಯಾಬ್ಲೆಟ್‌ಗಳಲ್ಲಿ ವಾಟ್ಸಾಪ್ ಬಳಸುತ್ತಾರೋ ಅವರು ಇನ್ಮುಂದೆ ಈ ಸೌಲಭ್ಯ ಪಡೆದುಕೊಳ್ಳಬಹುದು. ಜೊತೆಗೆ ಈ ವೇಳೆ ಒಬ್ಬರ ಜೊತೆ ಚಾಟಿಂಗ್ ನಲ್ಲಿ ನಿರತವಾಗುವುದರ ಜೊತೆಗೆ ಇನ್ನೊಂದು ಬದಿಯಲ್ಲಿ ವಾಟ್ಸಾಪ್‌ನ ಇತರೆ ಫೀಚರ್ಸ್ ಅನ್ನು ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಸಂಬಂಧ ಈ ಬದಲಾವಣೆಯನ್ನು WABetaInfo ಗಮನಿಸಿದ್ದು, ಇದರ ವರದಿಯ ಪ್ರಕಾರ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಳಕೆದಾರರು ವಾಟ್ಸಾಪ್‌ನ ಸ್ಪ್ಲಿಟ್ ವ್ಯೂ ಫೀಚರ್ಸ್ ಅನ್ನು ಬಳಕೆ ಮಾಡಲು ಅನುಮತಿಸಲಾಗುತ್ತದೆ ಎಂದು ಉಲ್ಲೇಖಿಸಿದೆ. ಇನ್ನು ಸಾಮಾನ್ಯವಾಗಿ ಟ್ಯಾಬ್ಲೆಟ್‌ನಲ್ಲಿ ವಾಟ್ಸಾಪ್ ಬಳಕೆ ಮಾಡುವಾಗ ವಾಟ್ಸಾಪ್ ಸಂಪೂರ್ಣ ಡಿಸ್‌ಪ್ಲೇ ಯನ್ನು ಆಕ್ರಮಿಸಿಕೊಳ್ಳುತ್ತದೆ. ಈ ವೇಳೆ ಇತರೆ ಚಾಟ್ ವಿಭಾಗವನ್ನು ತೆರೆಯಬೇಕು ಎಂದರೆ ಚಾಟ್ ಲಿಸ್ಟ್‌ಗೆ ಹಿಂತಿರುಗಿ ನಂತರ ಬೇಕಾದ ಚಾಟ್ ಓಪನ್ ಮಾಡಬೇಕು. ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ.
ಯಾಕೆಂದರೆ, ಈ ಹೊಸ ಸೌಲಭ್ಯದ ಮೂಲಕ ಚಾಟ್‌ನಿಂದ ನಿರ್ಗಮಿಸುವ ಅಗತ್ಯವಿಲ್ಲದೇ ಚಾಟ್ ಪಟ್ಟಿಯನ್ನು ತ್ವರಿತವಾಗಿ ಸ್ಕ್ರೋಲ್ ಮಾಡುವ ಮೂಲಕ ಚಾಟ್‌ಗಳನ್ನು ಕಂಟ್ರೋಲ್ ಮಾಡಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ಬಳಕೆದಾರರಿಗೆ ಸಮಯದ ವ್ಯರ್ಥವಾಗದೆ ಸುಲಭವಾಗಿ ಹಾಗೂ ವೇಗವಾಗಿ ಬೇಕಾದ ಚಾಟ್ ನಲ್ಲಿ ಸಕ್ರಿಯವಾಗಬಹುದು. ಇನ್ನು ಈ ಸೇವೆ ಪಡೆದುಕೊಳ್ಳಲು ಬಳಕೆದಾರರು ಆಂಡ್ರಾಯ್ಡ್ ಬೀಟಾ ಪ್ರೋಗ್ರಾಂ ಮೂಲಕ ಅಪ್‌ಡೇಟ್ ಮಾಡಬೇಕಿದೆ. ಈ ನವೀಕರಣ ಆವೃತ್ತಿ 2.23.5.9 ಅನ್ನು ಹೊಂದಿದೆ.

ಶೀಘ್ರದಲ್ಲೇ ವಾಟ್ಸಾಪ್ ಗ್ರೂಪ್ ಶೆಡ್ಯುಲ್ ಕಾಲ್ ಫೀಚರ್ಸ್
ಇದರೊಂದಿಗೆ ಕೆಲವು ದಿನಗಳ ಹಿಂದೆ ಶೆಡ್ಯೂಲ್ ಗ್ರೂಪ್ ಕಾಲ್ ಫೀಚರ್ಸ್ ಬಗ್ಗೆಯೂ ಘೋಷಣೆ ಮಾಡಿರುವ ವಾಟ್ಸಾಪ್, ಈ ಮೂಲಕ ಬಳಕೆದಾರರು ಗ್ರೂಪ್ ಕಾಲ್ ಟೈಂ ಅನ್ನು ಶೆಡ್ಯೂಲ್ ಮಾಡುವುದಕ್ಕೆ ಅವಕಾಶವನ್ನು ನೀಡಲು ಮುಂದಾಗಿದೆ. ಸದ್ಯ ಈ ಫೀಚರ್ಸ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದ್ದು, ಈ ಫೀಚರ್ಸ್ ಆಪಲ್‌ನ ಟೆಸ್ಟ್‌ಫ್ಲೈಟ್ ಪ್ರೋಗ್ರಾಂಗೆ ದಾಖಲಾದ ಬಳಕೆದಾರರಿಗೆ ಲಭ್ಯವಾಗುತ್ತಿದೆ.


Click it and Unblock the Notifications








