WhatsApp: ನಾವು ಭಾರತವನ್ನೇ ತೊರೆಯುತ್ತೇವೆ ಎಂದ ವಾಟ್ಸಾಪ್! ಹೈಕೋರ್ಟ್‌ನಲ್ಲಿ ವಾದ-ಪ್ರತಿವಾದ... ಯಾಕೆ ಗೊತ್ತಾ?
ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ವಾಟ್ಸಾಪ್ (Whatsapp) ಬಳಕೆದಾರರಿಗೆ ವಿಶೇಷವಾದ ಫೀಚರ್ಸ್ ಮೂಲಕ ಹಾಗೂ ಉತ್ತಮ ಭದ್ರತೆಯ ಭರವಸೆಯ ಮೂಲಕ ಭಿನ್ನ ಅನುಭವ ನೀಡುತ್ತಿದೆ. ಆದರೆ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರಕ್ಕೆ (Delhi High Court) ವಾಟ್ಸಾಪ್ ಸವಾಲ್ ಎಸೆದಿದೆ.
ಹೌದು, ಯಾವುದೇ ಟೆಕ್ ಸಂಸ್ಥೆ ಭಾರತದ ನೆಲದ ಕಾನೂನನ್ನು ಉಲ್ಲಂಘನೆ ಮಾಡಿದ್ರೆ ಅದರ ವಿರುದ್ಧ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ, ಈ ವಿಷಯದಲ್ಲಿ ಮಾತ್ರ ಇದು ಭಿನ್ನ. ಇದರಿಂದ ಭಾರತದ ಕಾನೂನನ್ನು ಗೌರವಿಸುವ ಹಾಗೂ ಭಾರತದ ಬಳಕೆದಾರರ ಭದ್ರತೆ ದೃಷ್ಟಿಯಿಂದ ವಾಟ್ಸಾಪ್ ದಿಟ್ಟ ನಿರ್ಧಾರವನ್ನು ತಿಳಿಸಿದೆ. ಹಾಗಿದ್ರೆ, ಏನಿದು ವಿಷಯ?, ವಾಟ್ಸಾಪ್ ದೆಹಲಿ ಕೋರ್ಟ್‌ಗೆ ಯಾಕೆ ಈ ರೀತಿ ಹೇಳಿಕೆ ನೀಡಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್‌ನ ದಿಟ್ಟ ಹೇಳಿಕೆ: ಗೂಢಲಿಪೀಕರಣವನ್ನು ಅಂದರೆ ವಾಟ್ಸಾಪ್‌ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ತೆಗೆದುಹಾಕಬೇಕು ಎಂದು ನೀವು ತಿಳಿಸಿದರೆ ನಾವು ಭಾರತವನ್ನೇ ತೊರೆಯುತ್ತೇವೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವಾಟ್ಸಾಪ್ ಸ್ಪಷ್ಟವಾಗಿ ತಿಳಿಸಿದೆ. ಮೆಸೆಜ್ ಎನ್‌ಕ್ರಿಪ್ಶನ್ ಅನ್ನು ಬ್ರೇಕ್ ಮಾಡಲು ಒತ್ತಾಯಿಸಿದರೆ ಭಾರತದಲ್ಲಿ ವಾಟ್ಸಾಪ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ದೆಹಲಿ ಹೈಕೋರ್ಟ್‌ಗೆ ಹೇಳಿದೆ.
ಯಾವುದೇ ಮೆಸೆಜ್ ಅನ್ನು ಈ ಪ್ಲಾಟ್‌ಫಾರ್ಮ್‌ನಲ್ಲಿ ಕಳುಹಿಸುವವರು ಮತ್ತು ಸ್ವೀಕರಿಸುವವರು ಮಾತ್ರ ತಿಳಿಯಬಹುದು ಎಂದು ಖಚಿತಪಡಿಸಿಕೊಳ್ಳುವ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುತ್ತದೆ ಎಂದು ಮೆಟಾ-ಮಾಲೀಕತ್ವದ ಕಂಪನಿ ವಾಟ್ಸಾಪ್ ಹೇಳಿದೆ. ಈ ಹೇಳಿಕೆಗೆ ಕಾರಣ ಆಗಿದ್ದು, ಮಾಹಿತಿ ತಂತ್ರಜ್ಞಾನ ನಿಯಮಗಳು 2021.

ಈ ಸಂಬಂಧ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅದರ ಪ್ರಕಾರ, ವಾಟ್ಸಾಪ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ವಕೀಲ ತೇಜಸ್ ಕರಿಯಾ, ಪ್ಲಾಟ್‌ಫಾರ್ಮ್‌ನಲ್ಲಿ ಎನ್‌ಕ್ರಿಪ್ಶನ್ ಅನ್ನು ಬ್ರೇಕ್ ಮಾಡಲು ಕೇಳಿದರೆ, ವಾಟ್ಸಾಪ್ ಇಲ್ಲಿಂದ ಹೋಗುತ್ತದೆ. ಕಂಪನಿಯು ಒದಗಿಸಿರುವ ಅದರ ಗೌಪ್ಯತೆಯ ಫೀಚರ್ಸ್‌ನಿಂದಾಗಿಯೇ ಜನರು ವಾಟ್ಸಾಪ್ ಅನ್ನು ಬಳಸುತ್ತಾರೆ ಎಂದು ಕರಿಯಾ ಕೋರ್ಟ್‌ಗೆ ತಿಳಿಸಿದ್ದಾರೆ.ಇನ್ನು ವಾಟ್ಸಾಪ್ ಅನ್ನು ಭಾರತದಲ್ಲಿ 400 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಇದು ಈ ಪ್ಲಾಟ್‌ಫಾರ್ಮ್‌ಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ.
ಈ ನಡುವೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಸಹ ಕಳೆದ ವರ್ಷ ಮೆಟಾದ ವಾರ್ಷಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಾಗ, ಭಾರತವು ಮುಂಚೂಣಿಯಲ್ಲಿರುವ ದೇಶವಾಗಿದೆ ಮೆಸೆಜ್ ಕಳುಹಿಸುವಿಕೆಯನ್ನು ಹೇಗೆ ಅಳವಡಿಸಿಕೊಂಡಿವೆ ಎಂಬುದರ ವಿಷಯದಲ್ಲಿ ನೀವು ಜಗತ್ತನ್ನು ಮುನ್ನಡೆಸುತ್ತಿರುವಿರಿ ಎಂದು ಹಾಡಿ ಹೊಗಳಿದ್ದರು. ಆದರೆ ಈಗ ವಾಟ್ಸಾಪ್ ನೀಡಲಾದ ಭದ್ರತೆಯನ್ನು ಸಡಿಲ ಮಾಡುವಂತೆ ಸರ್ಕಾರ ಕೇಳಿದ ಹಿನ್ನೆಲೆ ವಾಟ್ಸಾಪ್ ತನ್ನ ದಿಟ್ಟ ನಿಲುವನ್ನು ಪ್ರದರ್ಶಿಸಿದಿದೆ.

ಅಂದರೆ ವಾಟ್ಸಾಪ್ ಮತ್ತು ಫೇಸ್‌ಬುಕ್‌ನ ಮೂಲ ಕಂಪನಿಯಾದ ಮೆಟಾ, ಮಾಹಿತಿ ತಂತ್ರಜ್ಞಾನ ನಿಯಮಗಳು 2021 ಗೆ ಸವಾಲು ಮಾಡಿದೆ. ಇದರಲ್ಲಿ ಮೆಸೆಜ್‌ಗಳನ್ನು ಪತ್ತೆಹಚ್ಚಲು ಮತ್ತು ಮೆಸೆಜ್‌ಗಳನ್ನು ಕಳುಹಿಸುವವರನ್ನು ಗುರುತಿಸಲು ವಾಟ್ಸಾಪ್‌ಗೆ ಕೇಳಲಾಗಿದೆ. ಆದರೆ, ಈ ಕಾನೂನು ಎನ್‌ಕ್ರಿಪ್ಶನ್ ಅನ್ನು ದುರ್ಬಲಗೊಳಿಸುತ್ತದೆ ಮತ್ತು ಭಾರತೀಯ ಸಂವಿಧಾನದ ಅಡಿಯಲ್ಲಿ ಬಳಕೆದಾರರ ಗೌಪ್ಯತೆಯ ರಕ್ಷಣೆಯನ್ನು ಉಲ್ಲಂಘಿಸುತ್ತದೆ ಎಂದು ವಾಟ್ಸಾಪ್ ತನ್ನ ವಾದದಲ್ಲಿ ಉಲ್ಲೇಖ ಮಾಡಿದೆ.
ನ್ಯಾಯಾಲಯದಲ್ಲಿ ವಾಟ್ಸಾಪ್ ಹೇಳಿದ್ದೇನು?: ಈ ನಿಯಮಗಳು ಎನ್‌ಕ್ರಿಪ್ಶನ್ ಮತ್ತು ಬಳಕೆದಾರರ ಗೌಪ್ಯತೆಯನ್ನು ದುರ್ಬಲಗೊಳಿಸುತ್ತವೆ. ಇದು ಭಾರತದ ಸಂವಿಧಾನದ 14, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಿದ ಬಳಕೆದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತದೆ. ಇಂತಹ ನಿಯಮ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ಬ್ರೆಜಿಲ್‌ನಲ್ಲಿಯೂ ಇಲ್ಲ. ನಾವು ಸಂಪೂರ್ಣ ಸರಪಳಿಯನ್ನು ಇಟ್ಟುಕೊಳ್ಳಬೇಕು ಮತ್ತು ಯಾವ ಮೆಸೆಜ್‌ಗಳನ್ನು ಡೀಕ್ರಿಪ್ಟ್ ಮಾಡಲು ನಮ್ಮನ್ನು ಕೇಳಲಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಇದರರ್ಥ ಲಕ್ಷಾಂತರ ಮೆಸೆಜ್‌ಗಳನ್ನು ಹಲವು ವರ್ಷಗಳವರೆಗೆ ಸಂಗ್ರಹಿಸಬೇಕಾಗುತ್ತದೆ ಎಂದು ತಿಳಿಸಿದೆ.
ಈ ಹೇಳಿಕೆಗೆ ಸರ್ಕಾರದ ಪ್ರತಿಕ್ರಿಯೆ ಏನು?: ಇನ್ನು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಕೀರ್ತಿಮಾನ್ ಸಿಂಗ್ ಅವರು ನಿಯಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಮೆಸೆಜ್‌ಗಳನ್ನು ಕಳುಹಿಸುವವರನ್ನು ಪತ್ತೆಹಚ್ಚುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಇಂತಹ ವ್ಯವಸ್ಥೆ ಇಂದಿನ ವಾತಾವರಣದಲ್ಲಿ ಅಗತ್ಯವಾಗಿದೆ ಎಂದು ಕೀರ್ತಿಮಾನ್ ಸಿಂಗ್ ತಿಳಿಸಿದ್ದಾರೆ. ಈ ನಡುವೆ ದೆಹಲಿ ಹೈಕೋರ್ಟ್ ವಾಟ್ಸಾಪ್ ಮತ್ತು ಮೆಟಾ ಅರ್ಜಿಗಳನ್ನು ಆಗಸ್ಟ್ 14 ಕ್ಕೆ ಮುಂದೂಡಿದೆ. ಇದರ ಜೊತೆಗೆ ಖಾಸಗಿತನದ ಹಕ್ಕು ಸಂಪೂರ್ಣವಲ್ಲ ಮತ್ತು ಸಮತೋಲನವನ್ನು ಸಾಧಿಸಬೇಕು ಎಂದು ಪೀಠ ಹೇಳಿದೆ.


Click it and Unblock the Notifications








