WhatsApp ನ ಈ ಹೊಸ ಫೀಚರ್ಸ್ ನಿಮ್ಮನ್ನು ಸಂಕಷ್ಟಕ್ಕೀಡುಮಾಡಬಹುದು?, ಎಚ್ಚರಿಕೆಯಿಂದ ಬಳಸುವುದು ಹೇಗೆ?
ವಾಟ್ಸಾಪ್‌ನ (Whatsapp) ಹಲವಾರು ಫೀಚರ್ಸ್ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡಲಿವೆ. ಅದರಲ್ಲೂ ಸಾಕಷ್ಟು ಫೀಚರ್ಸ್ ಅಂತೂ ವಾಟ್ಸಾಪ್‌ನಲ್ಲಿ ಹೊಸ ಅನುಭವ ನೀಡುತ್ತಿವೆ. ಆದರೆ, ಕೆಲವು ದಿನಗಳ ಹಿಂದೆ ಪರಿಚಯಿಸಲಾದ ಈ ವಿಶೇಷ ಫೀಚರ್ಸ್‌ನಿಂದ ಬಳಕೆದಾರರು ಸಮಸ್ಯೆಗೆ ಈಡಾಗಲಿದ್ದಾರೆ.
ಹೌದು, ವಾಟ್ಸಾಪ್ ನ ಹಲವಾರು ಫೀಚರ್ಸ್‌ಗಳು ಬಳಕೆದಾರರಿಗೆ ಮೊದಲು ಭದ್ರತೆಯನ್ನು ಖಾತ್ರಿ ಪಡಿಸುತ್ತಿದ್ದವು. ಆದರೆ, ಈ ಫೀಚರ್ಸ್ ಮಾತ್ರ ಬಳಕೆದಾರರಿಗೆ ಕೆಲವು ಗೊಂದಲಗಳನ್ನು ಉಂಟು ಮಾಡಿದೆ. ಇದರಿಂದಾಗಿ ಬಳಕೆದಾರರು ತಮ್ಮ ಡೇಟಾ ಸೋರಿಕೆ ಬಗ್ಗೆ ಆತಂಕಕ್ಕೆ ಒಳಗಾಗುವಂತೆ ಆಗಿದೆ. ಹಾಗಿದ್ರೆ, ಯಾವುದು ಈ ಫೀಚರ್ಸ್?, ಇದರಿಂದ ವಾಟ್ಸಾಪ್ ಬಳಕೆದಾರರಿಗೆ ಆಗುವ ಸಮಸ್ಯೆ ಏನು?, ಇದರಿಂದ ಬಚಾವ್ ಆಗುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ವಾಟ್ಸಾಪ್ ನ ಈ ಫೀಚರ್ಸ್‌ನಲ್ಲಿ ಸಮಸ್ಯೆ: ವಾಟ್ಸಾಪ್ ಕೆಲವು ದಿನಗಳ ಹಿಂದೆ ಎಲ್ಲಾ ಬಳಕೆದಾರರಿಗೂ ಸಹ ಸ್ಕ್ರೀನ್ ಶೇರ್ ಫೀಚರ್ಸ್ (Screen share features)ಅನ್ನು ನೀಡಿದೆ. ಇದು ಝೂಮ್, ಗೂಗಲ್ ಮೀಟ್, ಆಪರ್ ಫೇಸ್ ಟೈಮ್ ಹಾಗೂ ಇನ್ನಿತರೆ ಮೀಟಿಂಗ್ ಆಧಾರಿತ ಆಪ್‌ಗಳು ನೀಡುವ ಪ್ರಯೋಜನವನ್ನೇ ನೀಡುತ್ತದೆ. ಅಂದರೆ, ಪ್ರೆಸೆಂಟೇಶನ್ ಶೇರ್ ಮಾಡಲು ಅಥವಾ ಕೆಲವು ಕಾರ್ಯಗಳನ್ನು ಹೇಗೆ ಮಾಡಬೇಕೆಂದು ಇತರರಿಗೆ ತೋರಿಸಲು ಈ ಫೀಚರ್ಸ್ ಉಪಯುಕ್ತವಾಗಿದೆ.
ಕೊರೊನಾ ನಂತರದ ಸಮಯದಲ್ಲಿ ಸ್ಕ್ರೀನ್ ಶೇರ್ ಹೆಚ್ಚು ಜನಪ್ರಿಯವಾಗಿದ್ದು, ಜೂಮ್, ಗೂಗಲ್ ಮೀಟ್ ಮತ್ತು ಆಪಲ್‌ನ ಫೇಸ್‌ಟೈಮ್‌ನಂತಹ (Zoom, Google Meet and Apple FaceTime) ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನರು ಸಾಕಷ್ಟು ಪ್ರಯೋಜನ ಸಹ ಪಡೆದಿದ್ದಾರೆ. ಈ ನಡುವೆ ವಾಟ್ಸಾಪ್‌ನಲ್ಲೂ ಈ ಫೀಚರ್ಸ್ ಲಭ್ಯ ಇದ್ದು, ಬಳಕೆದಾರರಿಗೆ ವಿಡಿಯೋ ಕರೆಗಳ ಸಮಯದಲ್ಲಿ ತಮ್ಮ ಫೋನ್‌ನ ಡಿಸ್‌ಪ್ಲೇಯನ್ನು ಇತರರೊಂದಿಗೆ ಶೇರ್ ಮಾಡಿಕೊಳ್ಳಲು ಅನುಮತಿಸುತ್ತದೆ. ಆದರೆ, ಇದೇ ಫೀಚರ್ಸ್ ಕೆಲವು ಅಪಾಯಗಳನ್ನು ತರುತ್ತದೆ ಎನ್ನಲಾಗಿದೆ.
ಸ್ಕ್ರೀನ್ ಶೇರ್ ನಿಂದಾಗುವ ಅಪಾಯಗಳೇನು?:
ಗೌಪ್ಯತೆ ಮತ್ತು ಸೂಕ್ಷ್ಮ ಮಾಹಿತಿಗೆ ಧಕ್ಕೆ: ಈ ಫೀಚರ್ಸ್ ಅನ್ನು ಎಚ್ಚರಿಕೆಯಿಂದ ಬಳಸದಿದ್ದರೆ, ಆಕಸ್ಮಿಕವಾಗಿ ಇತರರಿಗೆ ಸೂಕ್ಷ್ಮ ಅಥವಾ ಖಾಸಗಿ ಮಾಹಿತಿಯನ್ನು ತೋರಿಸಿದಂತೆ ಆಗುತ್ತದೆ. ಪಾಸ್‌ವರ್ಡ್‌ಗಳು, ಮೆಸೆಜ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ನೀವು ಹಂಚಿಕೊಳ್ಳಲು ಬಯಸದ ಇತರ ಕಂಟೆಂಟ್ ನಿಮ್ಮ ಫೋನ್‌ನಲ್ಲಿ ಖಂಡಿತಾ ಇರುತ್ತದೆ. ನೀವು ಆಕಸ್ಮಿಕವಾಗಿ ತಪ್ಪಾದ ಕಂಟೆಂಟ್ ಅನ್ನು ಈ ವೇಳೆ ಓಪನ್ ಮಾಡಬಹುದು. ಇದರಿಂದಾಗಿ ನೀವು ಮುಜುಗರ ಅಥವಾ ಗೊಂದಲಕ್ಕೆ ಒಳಗಾಗಬಹುದಾಗಿದೆ.
ರೆಕಾರ್ಡಿಂಗ್ ಹಾಗೂ ಶೇರಿಂಗ್: ಕರೆಯ ಸಮಯದಲ್ಲಿ ಭಾಗವಹಿಸುವವರು ನಿಮ್ಮ ಸ್ಕ್ರೀನ್ ಶೇರ್ ಕಂಟೆಂಟ್ ಅನ್ನು ರೆಕಾರ್ಡ್ ಮಾಡಬಹುದು ಅಥವಾ ನಿಮ್ಮ ಅನುಮತಿಯಿಲ್ಲದೆ ಕರೆಯ ಸಮಯದಲ್ಲಿ ನೀವು ಹಂಚಿಕೊಳ್ಳುವ ಕಂಟೆಂಟ್‌ನ ಸ್ಕ್ರೀನ್‌ಶಾಟ್‌ಗಳನ್ನು(Screenshot) ತೆಗೆದುಕೊಳ್ಳಬಹುದು. ಇದು ಗೌಪ್ಯತೆಗೆ ಧಕ್ಕೆ ಉಂಟು ಮಾಡಲಿದೆ ಹಾಗೂ ನಿಮ್ಮ ಕಂಟೆಂಟ್ ಅನಧಿಕೃತ ಶೇರ್‌ಗೂ ಸಹ ಕಾರಣ ಆಗಬಹುದಾಗಿದೆ.
ಈ ಫೀಚರ್ಸ್ ಎಷ್ಟೇ ಸಹಾಯಕವಾಗಿದ್ದರೂ ನಿಮ್ಮ ಫೋನ್‌ನಿಂದ ಮಾಹಿತಿಯನ್ನು ಶೇರ್ ಮಾಡಿಕೊಳ್ಳುವಾಗ ನೀವು ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಡಿಸ್‌ಪ್ಲೇಯನ್ನು ಹಂಚಿಕೊಳ್ಳಲು ಪ್ರಾರಂಭಿಸುವ ಮೊದಲು ಯಾರು ನೋಡಬೇಕು ಯಾರು ನೋಡಬಾರದು ಎಂಬುದನ್ನು ಮೊದಲೇ ನಿರ್ಧಿರಿಸಿಕೊಳ್ಳಿ. ಹಾಗಿದ್ರೆ, ಬನ್ನಿ ಈ ಸಮಸ್ಯೆಗಳಿಂದ ಪಾರಾಗುವುದು ಹೇಗೆ? ಹಾಗೂ ಈ ಫೀಚರ್ಸ್ ಅನ್ನು ಎಚ್ಚರಿಕೆಯಿಂದ ಬಳಕೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
-ವಾಟ್ಸಾಪ್‌ನಲ್ಲಿ ನೀವು ನಂಬುವ ಜನರೊಂದಿಗೆ ಮಾತ್ರ ನಿಮ್ಮ ಡಿಸ್‌ಪ್ಲೇಯನ್ನು ಶೇರ್ ಮಾಡಿಕೊಳ್ಳಿ, ಆಕಸ್ಮಿಕವಾಗಿ ಯಾವುದೇ ಇತರ ಫೋಲ್ಡರ್ ತೆರೆಯುವುದನ್ನು ತಪ್ಪಿಸಲು ನೀವು ಹಂಚಿಕೊಳ್ಳಲು ಬಯಸುವ ಕಂಟೆಂಟ್ ಬ್ಯಾಗ್ರೌಂಡ್‌ನಲ್ಲಿ ಇದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಿ, ನೀವು ಪೂರ್ಣಗೊಳಿಸಿದಾಗ ಸ್ಕ್ರೀನ್ ಶೇರ್ ಸೆಶನ್ ಅನ್ನು ಕೊನೆಗೊಳಿಸಿ.
-ಇಂಟರ್ನೆಟ್ ಮೂಲಕ ನಿಮ್ಮ ಡಿಸ್‌ಪ್ಲೇಯನ್ನು ಹಂಚಿಕೊಳ್ಳುವಾಗ ಸುರಕ್ಷಿತ ಸಂಪರ್ಕವನ್ನು ಬಳಕೆ ಮಾಡಿ, ಇತ್ತೀಚಿನ ಭದ್ರತಾ ಪರಿಹಾರಗಳು ಮತ್ತು ನವೀಕರಣಗಳನ್ನು ಸ್ವೀಕರಿಸಲು ನಿಮ್ಮ ಮೊಬೈಲ್ ಡಿವೈಸ್‌ನ ಆಪರೇಟಿಂಗ್ ಸಿಸ್ಟಂ, ಭದ್ರತಾ ಸಾಫ್ಟ್‌ವೇರ್ ಮತ್ತು ವಾಟ್ಸಾಪ್ ಅನ್ನು ನವೀಕೃತವಾಗಿರಿಸಿ. ಈ ಕೆಲಸ ಮಾಡುವುದರಿಂದ ನೀವು ಸಂಭಾವ್ಯವಾಗಿ ಎದುರಾಗುವ ಹಲವಾರು ಸಮಸ್ಯೆಗಳಿಂದ ಪಾರಾಗಬಹುದು.

ವಾಟ್ಸಾಪ್‌ನಲ್ಲಿ ಈ ಫೀಚರ್ಸ್ ಬಳಕೆ ಹೇಗೆ?
ಹಂತ 1: ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ವಾಟ್ಸಾಪ್ ಆಪ್ ಓಪನ್ ಮಾಡಿ ಅಲ್ಲಿ ನೀವು ನೀವು ಬಯಸಿದ ಸಂಪರ್ಕ ಅಥವಾ ಗ್ರೂಪ್‌ನೊಂದಿಗೆ ವಿಡಿಯೋ ಕರೆ ಆರಂಭಿಸಿ. ಇದಾದ ನಂತರದಲ್ಲಿ ಡಿಸ್‌ಪ್ಲೇನ ಕೆಳಭಾಗದಲ್ಲಿರುವ 'ಸ್ಕ್ರೀನ್ ಶೇರ್' ಐಕಾನ್ ಅನ್ನು ನೀವು ಗಮನಿಸಬಹುದು. ಅದರ ಮೇಲೆ ಟ್ಯಾಪ್ ಮಾಡಿ.
ಹಂತ 2: ನೀವು ವಾಟ್ಸಾಪ್ ಬಳಕೆ ಮಾಡಿಕೊಂಡು ರೆಕಾರ್ಡಿಂಗ್ ಅಥವಾ ಕಾಸ್ಟಿಂಗ್ ಪ್ರಾರಂಭಿಸಲಿರುವಿರಿ ಎಂದು ಸೂಚಿಸುವ ಪ್ರಾಂಪ್ಟ್ ಅನ್ನು ನಿಮ್ಮ ಫೋನ್ ಪ್ರದರ್ಶಿಸುತ್ತದೆ. ನಂತರದಲ್ಲಿ ಸ್ಕ್ರೀನ್ ಶೇರ್ ಪ್ರಾರಂಭಿಸಲು 'ಈಗ ಪ್ರಾರಂಭಿಸಿ' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಇದೇ ವೇಳೆ ಸ್ಕ್ರೀನ್ ಶೇರ್ ಮುಕ್ತಾಯಗೊಳಿಸಲು, 'ಶೇರ್ ಮಾಡುವುದನ್ನು ನಿಲ್ಲಿಸಿ' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿದರೆ ಸಾಕು.


Click it and Unblock the Notifications








