ವಾಟ್ಸಾಪ್‌ನಲ್ಲಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಹೊಸ ಫೀಚರ್ಸ್; ಉಪಯೋಗ ಏನು!?
ವಾಟ್ಸಾಪ್‌ನಲ್ಲಿ ಈಗಾಗಲೇ ಸಾಕಷ್ಟು ಪ್ರಮುಖ ಹಾಗೂ ಅಗತ್ಯ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದ್ದು, ಬಳಕೆದಾರರು ಇದರಿಂದ ಸಾಕಷ್ಟು ಅನುಕೂಲ ಪಡೆಯುತ್ತಿದ್ದಾರೆ. ಆದರೆ, ತುಂಬಾ ಅಗತ್ಯವಾಗಿ ಬೇಕಾಗಿದ್ದ ಫೀಚರ್ಸ್ ಅನ್ನು ವಾಟ್ಸಾಪ್ ಈವರೆಗೂ ಘೋಷಣೆ ಮಾಡಿರಲಿಲ್ಲ. ಆದರೆ, ಇದೀಗ ಈ ಫೀಚರ್ಸ್ ಹಲವಾರು ಬಳಕೆದಾರರಿಗೆ ಖುಷಿ ನೀಡಿದೆ.
ಹೌದು, ವಾಟ್ಸಾಪ್‌ನಲ್ಲಿ ಕೆಲವು ದಿನಗಳ ಹಿಂದಷ್ಟೇ ಬಾಟಮ್ ನ್ಯಾವಿಗೇಶನ್ ಬಾರ್ ಆಯ್ಕೆ ನೀಡುವ ಬಗ್ಗೆ ಘೋಷಣೆ ಮಾಡಿತ್ತು. ಇದಕ್ಕೂ ಮೊದಲು ಲಾಕ್ ಚಾಟ್ ಫೀಚರ್ಸ್ ಬಗ್ಗೆ ಘೋಷಣೆ ಮಾಡಿ ಭಾರೀ ಸದ್ದು ಮಾಡಿತ್ತು. ಇದೀಗ ಸಂಪರ್ಕಗಳ ವಿಷಯಕ್ಕೆ ಸಂಬಂಧಿಸಿದ ಹೊಸ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಹಾಗಿದ್ರೆ, ಏನಿದು ಹೊಸ ಫೀಚರ್ಸ್?, ಇದರಿಂದ ಬಳಕೆದಾರರಿಗೆ ಆಗುವ ಲಾಭ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏನಿದು ವಾಟ್ಸಾಪ್‌ನ ಹೊಸ ಫೀಚರ್ಸ್? : ಈ ಮೊದಲು ಸ್ಮಾರ್ಟ್‌ಫೋನ್‌ಗಳಲ್ಲಿ ಉಳಿಸಲಾದ ಸಂಪರ್ಕಗಳು ಮಾತ್ರ ವಾಟ್ಸಾಪ್‌ನಲ್ಲಿ ಗೋಚರಿಸುತ್ತಿದ್ದವು. ಆದರೆ, ವಾಟ್ಸಾಪ್‌ನಲ್ಲಿಯೇ ಅನಾಮಿಕ ಸಂಖ್ಯೆಗಳನ್ನು ಸೇವ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇನ್ಮುಂದೆ ವಾಟ್ಸಾಪ್ ಆಪ್‌ನಲ್ಲೇ ಸಂಪರ್ಕಗಳನ್ನು ಉಳಿಸುವ ಫೀಚರ್ಸ್ ಪರಿಚಯಿಸಲು ವಾಟ್ಸಾಪ್ ಮುಂದಾಗಿದೆ.
ಈ ಸಂಬಂಧ WABetaInfo ವರದಿ ಮಾಡಿದ್ದು, ಈ ಫೀಚರ್ಸ್ ಸಂಬಂಧಿ ಅಭಿವೃದ್ಧಿ ಪ್ರಯೋಗವು ಆಂಡ್ರಾಯ್ಡ್‌ನ ಬೀಟಾದಲ್ಲಿದೆ. ಅಪ್ಲಿಕೇಶನ್‌ನಲ್ಲಿ ಸಂಪರ್ಕಗಳನ್ನು ನಿರ್ವಹಿಸಿ ಎಂದು ಇದಕ್ಕೆ ಲೇಬಲ್ ಮಾಡಲಾಗಿದೆ. ಹಾಗೆಯೇ ಗೂಗಲ್ ಪ್ಲೇ ಸ್ಟೋರ್ ಮೂಲಕ ಇತ್ತೀಚಿನ ಆವೃತ್ತಿಗೆ ನವೀಕರಣ ಆಗುವ ಕೆಲವು ಪರೀಕ್ಷಕರಿಗೆ ಈ ಸೌಲಭ್ಯ ನೀಡಲಾಗುತ್ತಿದೆ. ಜೊತೆಗೆ ಭವಿಷ್ಯದಲ್ಲಿ ಹೆಚ್ಚಿನ ಪರೀಕ್ಷಕರಿಗೆ ನವೀಕರಣವು ವಿಸ್ತರಿಸುತ್ತದೆ ಎಂದು ಉಲ್ಲೇಖಿಸಲಾಗಿದೆ.

ಈ ಹಿಂದೆ ಆಪ್‌ನಲ್ಲಿ ಹೊಸ ಸಂಪರ್ಕವನ್ನು ಉಳಿಸಬೇಕಾದರೆ ಬಳಕೆದಾರರನ್ನು ಸ್ಥಳೀಯ ಸಂಪರ್ಕ ಆಪ್‌ಗೆ ಮರುನಿರ್ದೇಶಿಸಲಾಗುತ್ತಿತ್ತು. ಆದರೆ, ಈ ಹೊಸ ಫೀಚರ್ಸ್ ನೊಂದಿಗೆ ಈ ಎಲ್ಲಾ ಕೆಲಸ ವಾಟ್ಸಾಪ್‌ನಲ್ಲೇ ಸಾಧ್ಯವಾಗಲಿದೆ. ಜೊತೆಗೆ ಇದಕ್ಕೆ ಸಂಪರ್ಕಗಳನ್ನು ಸಂಪರ್ಕ ಪಟ್ಟಿ ಅಥವಾ ಗೂಗಲ್ ಖಾತೆಗೆ ಸೇರಿಸಬಹುದು ಎಂಬ ಆಯ್ಕೆಯನ್ನು ಇದು ನೀಡಲಿದೆ ಎಂದು ತಿಳಿದುಬಂದಿದೆ.
ಹಾಗೆಯೇ ಕೆಲವು ವರದಿಗಳ ಪ್ರಕಾರ ಈ ವಿಭಾಗದಲ್ಲಿ ಮೊದಲ ಹೆಸರು, ಕೊನೆಯ ಹೆಸರು, ದೇಶದ ಕೋಡ್, ಫೋನ್ ಸಂಖ್ಯೆ ಮತ್ತು ಸೇವ್ ಮಾಡಲಾಗುವ ವಿಭಾಗದ ಆಯ್ಕೆಗಳು ಕಾಣಿಸಿಕೊಳ್ಳುತ್ತವೆಯಂತೆ. ಜೊತೆಗೆ ಈ ಆಯ್ಕೆಗಳನ್ನು ಎಕ್ಸ್‌ಪ್ಲೋರ್ ಮಾಡಿದ ನಂತರ ಹೆಚ್ಚುವರಿ ವಿವರಗಳನ್ನು ಸಹ ನಮೂದಿಸಬಹುದು ಎಂದು ತಿಳಿದುಬಂದಿದೆ.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಹೊಸ ಫೀಚರ್ಸ್ ಲಭ್ಯವಿದೆಯೇ ಎಂದು ಪತ್ತೆಮಾಡಲು ನೀವು ಆಪ್‌ನ ಕೆಳಗಿನ ಬಲಭಾಗದಲ್ಲಿರುವ ಹಸಿರು ಸಂದೇಶದ ಐಕಾನ್ ಮೇಲೆ ಟ್ಯಾಪ್ ಮಾಡಿ. ನಂತರ ಹೊಸ ಸಂಪರ್ಕ ಅಥವಾ ಹೊಸ ಕಾಂಟ್ಯಾಕ್ಟ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಈ ವೇಳೆ ನಿಮ್ಮನ್ನು ಮತ್ತೊಂದು ಅಪ್ಲಿಕೇಶನ್‌ಗೆ ಮರುನಿರ್ದೇಶಿಸದಿದ್ದರೆ ಈ ಫೀಚರ್ಸ್ ನಿಮಗೆ ಲಭ್ಯ ಇದೆ ಎಂದರ್ಥ.

ಇದರಿಂದ ಲಾಭ ಏನು?: ಈ ಫೀಚರ್ಸ್ ಮೂಲಕ ಬಳಕೆದಾರರು ಸಾಕಷ್ಟು ಲಾಭ ಪಡೆಯಬಹುದು. ಪ್ರಮುಖವಾಗಿ ಸಮಯದ ಉಳಿತಾಯ ಹಾಗೆಯೇ ಗ್ರೂಪ್‌ನಲ್ಲಿ ಇರುವ ಯಾವುದೇ ಸಂಪರ್ಕವನ್ನು ಈ ಮೂಲಕ ಸುಲಭವಾಗಿ ಸೇವ್ ಮಾಡಿಕೊಂಡು ಅಗತ್ಯ ಎನ್ನುವವರ ಜೊತೆ ಸಂಪರ್ಕ ನಿರಂತರ ಸಂಪರ್ಕ ಸಾಧಿಸಬಹುದು.
ಈ ಹಿಂದೆ ಉಳಿಸದೆ ಇದ್ದ ಸಂಪರ್ಕಗಳ ಜೊತೆ ಚಾಟಿಂಗ್ ಮಾಡಬೇಕು ಎಂದರೆ ದೊಡ್ಡ ಹರಸಾಹಸ ಪಡಬೇಕಾಗಿತ್ತು. ಅಂದರೆ ಮೊದಲು ಮೊಬೈಲ್‌ನಲ್ಲಿ ನಂಬರ್ ಸೇವ್ ಮಾಡಿ, ನಂತರ ವಾಟ್ಸಾಪ್‌ಗೆ ಬಂದು ರಿಫ್ರೆಶ್ ಮಾಡಿದ ಬಳಿಕ ಆ ನಂಬರ್ ಅಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈ ಎಲ್ಲಾ ಸಣ್ಣ ಸಂಕಷ್ಟಗಳಿಗೆ ವಾಟ್ಸಾಪ್ ಮುಕ್ತಿ ತೋರಿಸಿದ್ದು, ಇದು ಬಹುಪಾಲು ಬಳಕೆದಾರರು ಕಾತುರದಿಂದ ನಿರೀಕ್ಷಿಸಿದ್ದ ಫೀಚರ್ಸ್ ಎನ್ನಬಹುದು.


Click it and Unblock the Notifications








