ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಯಾವಾಗ ಚಾರ್ಜ್‌ಗೆ ಹಾಕಬೇಕು?, ಯಾವಾಗ ಹಾಕಬಾರದು?
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಹೊಂದಿರುವವರು ಮೊದಲು ಬ್ಯಾಟರಿ ಬಗ್ಗೆ ಹೆಚ್ಚು ಕೇಂದ್ರೀಕರಿಸುತ್ತಾರೆ. ಅದರಲ್ಲೂ ಖರೀದಿ ಮಾಡುವಾಗ ಭಾರತದಲ್ಲಿ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಜನರು ಹೆಚ್ಚು ವಿಚಾರಿಸುತ್ತಾರೆ. ಅದಾಗ್ಯೂ ಸ್ಮಾರ್ಟ್‌ಫೋನ್ ಖರೀದಿ ಮಾಡದ ಮೇಲೆ ಕೆಲವು ಬಳಕೆದಾರರು ಬ್ಯಾಟರಿಗೆ ತೊಂದರೆ ಉಂಟಾಗುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ.
ಹೌದು, ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಹೆಚ್ಚು ಬಳಕೆ ಆಗುತ್ತಿರುವುದರಿಂದ ಬೇಗನೇ ಚಾರ್ಜ್ ಖಾಲಿಯಾಗುತ್ತದೆ. ಅದರಲ್ಲೂ ಕೆಲವರಂತೂ ಚಾರ್ಜ್ ಖಾಲಿಯಾಗುವ ಮುನ್ನವೇ ಮೊಬೈಲ್ ಅನ್ನು ಚಾರ್ಜ್‌ಗೆ ಇಡುತ್ತಾರೆ. ಇನ್ನೂ ಕೆಲವರೂ ಫೋನ್‌ನಲ್ಲಿ ಸಂಪೂರ್ಣವಾಗಿ ಚಾರ್ಜ್ ಖಾಲಿಯಾದ ಮೇಲೆ ಚಾರ್ಜಿಂಗ್‌ಗೆ ಹಾಕುತ್ತಾರೆ. ಆದರೆ, ಈ ಎರಡೂ ನಿಯಮಗಳಲ್ಲಿ ಯಾವುದು ಬೆಸ್ಟ್?, ಮೊಬೈಲ್ ಅನ್ನು ಯಾವಾಗ ಚಾರ್ಜ್‌ಗೆ ಹಾಕಿದರೆ ಉತ್ತಮ ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

ಸ್ಮಾರ್ಟ್‌ಫೋನ್ ಬ್ಯಾಟರಿ ಮೇಲೆ ಹೆಚ್ಚಿನ ಗಮನ: ಬ್ಯಾಟರಿಯ ಜೀವಿತಾವಧಿಯನ್ನು ಹೆಚ್ಚಿಗೆ ಮಾಡಲು ಅಥವಾ ಅದು ಹೆಚ್ಚಿನ ಬ್ಯಾಕಪ್ ನೀಡುವಂತೆ ಮಾಡಲು ಕೆಲವು ಬಳಕೆದಾರರಿಗೆ ಅರಿವು ಇಲ್ಲದಿರಬಹುದು. ಅದರಲ್ಲೂ ಚಾರ್ಜ್ ಸಂಪೂರ್ಣ ಖಾಲಿಯಾದ ನಂತರ ಚಾರ್ಜ್ ಮಾಡಬೇಕೆ? ಬ್ಯಾಟರಿ ಭರ್ತಿಯಾದ ತಕ್ಷಣವೇ ಚಾರ್ಜ್ ಆಗುವುದನ್ನು ತಡೆಯಬೇಕೆ? ಅಥವಾ ನಿರ್ದಿಷ್ಟ ಸಮಯದವರೆಗೆ ಚಾರ್ಜ್ ಮಾಡಬೇಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಇಲ್ಲಿ ಉತ್ತರ ಕಂಡುಕೊಳ್ಳೋಣ.
ಬ್ಯಾಟರಿ ಸಾಮರ್ಥ್ಯ ಸಂಪೂರ್ಣ ಖಾಲಿಯಾದ ನಂತರ ಚಾರ್ಜ್ ಮಾಡಬೇಕೆ?: ಕೆಲವು ಸಂಶೋಧಕರು ಹಾಗೂ ಈ ಸಂಬಂಧ ಅಧ್ಯಯನ ನಡೆಸಿದವರ ಪ್ರಕಾರ ಈ ರೀರಿ ಮಾಡುವುದು ತಪ್ಪು ಎನ್ನಲಾಗಿದೆ. ರೀಚಾರ್ಜ್ ಮಾಡುವ ಮೊದಲು ನಿಮ್ಮ ಫೋನ್‌ನ ಬ್ಯಾಟರಿ ಖಾಲಿಯಾಗಲು ಬಿಡುವುದರಿಂದ ಬ್ಯಾಟರಿಯ ಜೀವಿತಾವಧಿಯನ್ನು ವಿಸ್ತರಿಸುವುದಿಲ್ಲ. ಬದಲಾಗಿ ಫೋನ್‌ನ ಬ್ಯಾಟರಿಯ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂಬ ಅಚ್ಚರಿ ವಿಷಯ ತಿಳಿದುಬಂದಿದೆ.
ರೀಚಾರ್ಜ್ ಮಾಡುವ ಮೊದಲು ಫೋನ್ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗಲು ನೀವು ಬಿಡಬೇಕು ಎಂಬುದು ಒಂದು ಸಾಮಾನ್ಯ ತಪ್ಪು ಗ್ರಹಿಕೆಯಾಗಿದೆ. ಇಂದು ಫೋನ್‌ಗಳಲ್ಲಿ ಆಧುನಿಕ ಲಿಥಿಯಂ ಬ್ಯಾಟರಿಗಳನ್ನು ಬಳಕೆ ಮಾಡಲಾಗುತ್ತದೆ. ಪರಿಣಾಮ ನೀವು ನಿರಂತರವಾಗಿ ಬ್ಯಾಟರಿಯನ್ನು 0% ಗೆ ಬಿಟ್ಟರೆ ಅಥವಾ ರೀಚಾರ್ಜ್ ಮಾಡುವ ಮೊದಲು ಸಂಪೂರ್ಣ ಚಾರ್ಜ್ ಖಾಲಿ ಸಮಾಡಿದರೆ ಬ್ಯಾಟರಿಗಳು ವೇಗವಾಗಿ ತಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತವೆ ಎಂದು ಬ್ಯಾಟರಿ ಪ್ಲಸ್ ಬ್ಲಾಗ್ ಪೋಸ್ಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಇಷ್ಟು ಮಾತ್ರವಲ್ಲದೆ ಸೆಲ್ ಫೋನ್‌ಗಳು ಸೇರಿದಂತೆ ಪೋರ್ಟಬಲ್ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳು ಸಾಮಾನ್ಯ ರೀತಿಯ ಬ್ಯಾಟರಿಯಾಗಿದ್ದು, ರೀಚಾರ್ಜ್ ಮಾಡುವ ಮೊದಲು ಅವುಗಳನ್ನು 0% ಗೆ ಇಳಿಸಿದರೆ ಬ್ಯಾಟರಿಗಳು ಬೇಗ ಹಾಳಾಗುತ್ತವೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಕ್ಲೀನ್ ಎನರ್ಜಿ ಇನ್‌ಸ್ಟಿಟ್ಯೂಟ್ ಸ್ಪಷ್ಟಪಡಿಸಿದೆ. ಜೊತೆಗೆ ಬ್ಯಾಟರಿ ತಂತ್ರಜ್ಞಾನ ಕಂಪನಿ ಕ್ಯಾಡೆಕ್ಸ್ ನ ಬ್ಯಾಟರಿ ವಿವಿ ಸಹ ಇದೇ ಮಾಹಿತಿ ನೀಡಿದೆ.
ಇದೇ ವೇಳೆ ನಿಮ್ಮ ಫೋನ್ ಚಾರ್ಜ್ ಆಗಿದ್ದರು ಸಹ ಮತ್ತೆ ಅದನ್ನು ಚಾರ್ಜರ್‌ನಲ್ಲಿ ಇರಿಸುವುದು ಸಹ ಬ್ಯಾಟರಿಯ ಜೀವಿತಾವಧಿಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಕಂಡುಕೊಳ್ಳಲಾಗಿದೆ. ಆದರೆ ಯಾವಾಗ ಹೊಸ ಡಿವೈಸ್ ಅನ್ನು ಖರೀದಿ ಮಾಡುತ್ತೀರೋ ಆ ವೇಳೆ ಮಾತ್ರ ಪೂರ್ಣ ಚಾರ್ಜಿಂಗ್ ಮಾಡಬೇಕು. ಇದಾದ ನಂತರ ಈ ಮಾರ್ಗವನ್ನು ಅನುಸರಿಸಬಾರದು ಎಂದು ಬ್ಯಾಟರಿ ವಿವಿ ತಿಳಿಸಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆ ಮಾಡುವ ಲಿಥಿಯಂ ಬ್ಯಾಟರಿಯನ್ನು 20% ರಿಂದ 80% ನಡುವೆ ಇದ್ದಾಗ ಚಾರ್ಜ್ ಮಾಡಬಹುದು ಎಂದು ಬ್ಯಾಟರಿ ಪ್ಲಸ್‌ನ ಹಿರಿಯ ಗುಣಮಟ್ಟದ ಎಂಜಿನಿಯರ್ ಒಸಾರುಮೆನ್ ಇಗ್ಬಿನಿಜೆಸು ಸಂದರ್ಶನವೊಂದರಲ್ಲಿ ತಿಳಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿಯು ದೀರ್ಘಾವಧಿ ಬಾಳಿಕೆ ಬರುವಂತೆ ಮಾಡಬಹುದು ಎಂದು ಹೇಳಿದ್ದಾರೆ.
ಆಪಲ್ ಸಹ ಈ ಬಗ್ಗೆ ತನ್ನದೇ ಅಭಿಪ್ರಾಯ ಹೊರಹಾಕಿದ್ದು, ಚಾರ್ಜ್ ಮಾಡುವ ಮೊದಲು ನಿಮ್ಮ ಬ್ಯಾಟರಿಯನ್ನು 0% ಗೆ ಇಳಿಸುವ ಅಗತ್ಯವಿಲ್ಲ. ಬ್ಯಾಟರಿಯ ಜೀವಿತಾವಧಿಯನ್ನು ವಿಸ್ತರಿಸಲು ಐಫೋನ್ 80% ಚಾರ್ಜ್ ಅನ್ನು ತಲುಪಿದ ನಂತರ ಅದರ ಫೋನ್‌ಗಳು ಚಾರ್ಜಿಂಗ್ ಪ್ರಕ್ರಿಯೆಯನ್ನು ಮಿತಿಗೊಳಿಸುತ್ತದೆ ಜೊತೆಗೆ ಅದನ್ನು ನಿಧಾನಗೊಳಿಸುತ್ತದೆ ಎಂದು ತಿಳಿಸಿದೆ. ಇದರೊಂದಿಗೆ ಸ್ಯಾಮ್‌ಸಂಗ್ ಫೋನ್‌ಗಳನ್ನು 100% ಚಾರ್ಜ್ ಮಾಡಿದಾಗ ಬ್ಯಾಟರಿಗೆ ಹಾನಿಯಾಗದಂತೆ ಅದನ್ನು ಅನ್‌ಪ್ಲಗ್ ಮಾಡಲು ಹೇಳುತ್ತದೆ.
ಇದರೊಂದಿಗೆ ಗೂಗಲ್ ಪಿಕ್ಸೆಲ್ ಫೋನ್‌ಗಳು 100% ಚಾರ್ಜ್‌ಗೆ ಸಮೀಪಿಸಿದಾಗ ಆಪಲ್ ಫೋನ್‌ಗಳು ಚಾರ್ಜಿಂಗ್ ಅನ್ನು ಮಿತಿಗೊಳಿಸಿದಂತೆಯೇ ಇವೂ ಸಹ ಮಾಡುತ್ತವೆ. ಇನ್ನು ಆಪಲ್, ಸ್ಯಾಮ್‌ಸಂಗ್ ಹಾಗೂ ಗೂಗಲ್ ಸೇರಿದಂತೆ ಎಲ್ಲಾ ಕಂಪೆನಿಗಳು ಸಹ ಅತಿಯಾದ ಶಾಖವು ಬ್ಯಾಟರಿ ಅವಧಿಯನ್ನು ಕಡಿಮೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿವೆ. ಈ ಕಾರಣಕ್ಕೆ ನಿಮ್ಮ ಫೋನ್ ಚಾರ್ಜ್ ಭರ್ತಿಯಾಗಿದ್ದರೂ ಸಹ ಅದನ್ನು ಚಾರ್ಜಿಂಗ್‌ನಲ್ಲೇ ಬಿಟ್ಟು ಫೋನ್ ಬಿಸಿಯಾಗುವಂತೆ ಮಾಡಬೇಡಿ.

ಲಿಥಿಯಂ ಬ್ಯಾಟರಿಗಳನ್ನು ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ?: ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಕೇವಲ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲದೆ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (ಇಪಿಎ) ಪ್ರಕಾರ ಪವರ್ ಟೂಲ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಲ್ಯಾಪ್‌ಟಾಪ್‌ಗಳು, ಮಕ್ಕಳ ಆಟಿಕೆಗಳು, ಇ-ಸಿಗರೇಟ್‌ಗಳು, ಸಣ್ಣ ಮತ್ತು ದೊಡ್ಡ ಉಪಕರಣಗಳು, ಟ್ಯಾಬ್ಲೆಟ್‌ಗಳು ಮತ್ತು ಇ-ರೀಡರ್‌ಗಳಲ್ಲಿ ಬಳಕೆ ಮಾಡಲಾಗುತ್ತದಂತೆ.
ಈ ಕಾರಣಕ್ಕಾಗಿ ಈ ಮೇಲೆ ತಿಳಿಸಿದ ಎಲ್ಲಾ ಡಿವೈಸ್‌ಗಳಲ್ಲೂ ಸಹ ಬ್ಯಾಟರಿ 0%ಗೆ ಬರುವವರೆಗೆ ಕಾಯಬೇಡಿ ಅಥವಾ 80% ಚಾರ್ಜ್ ಆದ ಮೇಲೂ ಅದನ್ನು ಚಾರ್ಜಿಂಗ್‌ಗೆ ಇರಿಸಬೇಡಿ. ಈ ಮೂಲಕ ನೀವು ಖಂಡಿತಾ ನಿಮ್ಮ ಡಿವೈಸ್‌ಗಳ ಬ್ಯಾಟರಿ ಬ್ಯಾಕಪ್ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಅದಾಗ್ಯೂ ವಿವಿಧ ರೀತಿಯ ಬ್ಯಾಟರಿಗಳು ವಿಭಿನ್ನ ನಿಯಮಗಳನ್ನು ಹೊಂದಿವೆ. ಅಂದರೆ ನಿಕಲ್ ಆಧಾರಿತ ಬ್ಯಾಟರಿಗಳು ಶೂನ್ಯಕ್ಕೆ ಬರಲು ಬಿಡಬೇಕು. ಈ ರೀತಿ ಮಾಡಲಿಲ್ಲ ಎಂದರೆ ಈ ಬ್ಯಾಟರಿ ಬೇಗ ಹಾಳಾಗುತ್ತವೆ.
ಆದರೆ ನಿಕಲ್-ಆಧಾರಿತ ಬ್ಯಾಟರಿಗಳು ಲಿಥಿಯಂ-ಐಯಾನ್ ಬ್ಯಾಟರಿಗಳಂತೆ ದೀರ್ಘಕಾಲ ಬ್ಯಾಕಪ್ ನೀಡುವುದಿಲ್ಲ. ಆದ್ದರಿಂದ ನೀವು ಅವುಗಳನ್ನು ಬಳಸುವ ಹೆಚ್ಚಿನ ಸಾಧನಗಳನ್ನು ಹೊಂದಿಲ್ಲದಿರಬಹುದು. ಆದಾಗ್ಯೂ, ನೀವು ಇನ್ನೂ ಕೆಲವು ಕ್ಯಾಮ್‌ಕಾರ್ಡರ್‌ಗಳು, ಡ್ರಿಲ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಸಣ್ಣ ಸಾಧನಗಳಲ್ಲಿ ಅವುಗಳನ್ನು ಕಾಣಬಹುದು ಎಂದು ತಂತ್ರಜ್ಞಾನ ಉತ್ಪಾದನಾ ಕಂಪನಿಯಾದ ನ್ಯಾನೊಗ್ರಾಫಿ ನ್ಯಾನೊ ಟೆಕ್ನಾಲಜಿ ಹೇಳುತ್ತದೆ.


Click it and Unblock the Notifications








