ಟ್ವಿಟ್ಟರ್‌ನ ಹೊಸ ಲೋಗೋ 'X' ನಿಜಕ್ಕೂ ಯಾರಿಗೆ ಸೇರಿದ್ದು?, ಮಸ್ಕ್ ಮಾಡಿದ್ರಾ ಕಳ್ಳತನ!?
ಟ್ವಿಟ್ಟರ್ ಮೂಲಕ ಎಲಾನ್ ಮಸ್ಕ್ ಅವರು ಲಾಭ ಗಳಿಸುತ್ತಾರೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಆದರೆ, ಅವರ ದಿಢೀರ್ ನಿರ್ಧಾರಗಳು ಮಾತ್ರ ಜಗತ್ತಿನ ಎಲ್ಲಾ ಕಡೆ ಸದ್ದು ಮಾಡುತ್ತಲೇ ಇರುತ್ತವೆ. ಈ ನಡುವೆ ಟ್ವಿಟ್ಟರ್ ಲೋಗೋವನ್ನೇ ಬದಲಾವಣೆ ಮಾಡಿರುವ ಮಸ್ಕ್ ಅವರು ಪರ ವಿರೋಧದ ಅಲೆಗಳನ್ನು ಎದುರಿಸಿದ್ದರು. ಆದರೆ, ಈಗ ಮತ್ತೇ ಇದರಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.
ಹೌದು, ಎಲಾನ್ ಮಸ್ಕ್ ಇತ್ತೀಚೆಗೆ ಟ್ವಿಟರ್ ಅನ್ನು 'X' ಎಂದು ಮರುನಾಮಕರಣ ಮಾಡಿದ್ದಾರೆ. ವಿಷಯ ಏನೆಂದರೆ ಅಧಿಕೃತ ಕಂಪನಿ ಹ್ಯಾಂಡಲ್ ಅನ್ನು ಸಹ @X ಗೆ ಬದಲಾಯಿಸಿದ ನಂತರ ಮತ್ತೊಮ್ಮೆ ಪೇಚಿಗೆ ಸಿಲುಕಿದ್ದಾರೆ. ಅಂದರೆ ಈ ಹ್ಯಾಂಡಲ್ ಮೂಲತಃ ಜೀನ್ ಎಕ್ಸ್ ಹ್ವಾಂಗ್ ಅವರಿಗೆ ಸೇರಿದ್ದಾಗಿದೆ. ಆದರೆ, ಮಸ್ಕ್‌ಮೂಲ ಬಳಕೆದಾರರಿಗೆ ಈ ಬಗ್ಗೆ ಯಾವುದೇ ಮಾಹಿತಿ ಅಥವಾ ಆರ್ಥಿಕ ಪರಿಹಾರವನ್ನು ನೀಡಿಲ್ಲ ಎನ್ನಲಾಗಿದೆ. ಬನ್ನಿ ಈ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ.

ಇನ್ನು ಮಸ್ಕ್ X ಬ್ರಾಂಡ್ ಅನ್ನು ಘೋಷಣೆ ಮಾಡಿದ ಬಳಿಕ ಟ್ರೋಲ್‌ಗಳು ಹೆಚ್ಚಾಗುತ್ತಿವೆ. ಹಾಗೆಯೇ ಮಸ್ಕ್ ಕಳೆದ ಭಾನುವಾರ ರಾತ್ರಿ ಮರುಬ್ರಾಂಡಿಂಗ್ ಅನ್ನು ಘೋಷಣೆ ಮಾಡಿದ ಮಾರನೇ ದಿನ ಅಂದರೆ ಸೋಮವಾರ ಟ್ವಿಟರ್‌ನ ಪ್ರಧಾನ ಕಚೇರಿಯು ಹಳೆಯ ಲೋಗೋವನ್ನು ತೆಗೆದುಹಾಕಲಾಗಿದೆ. ಅದನ್ನು X ಲೋಗೋದೊಂದಿಗೆ ಬದಲಾವಣೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ ಎಲ್ಲಾ ಟ್ವಿಟರ್ ಹ್ಯಾಂಡಲ್‌ಗಳು ಎಕ್ಸ್ ಹ್ಯಾಂಡಲ್‌ಗಳಾಗಿವೆ.
ಈ ನಡುವೆ ಅಧಿಕೃತ ಕಂಪನಿ ಹ್ಯಾಂಡಲ್ ಜೊತೆಗ @TwitterBlueಹ್ಯಾಂಡಲ್ ಅನ್ನು ಈಗ @Xblueಗೆ ಮತ್ತು @TwitterSupport ಹ್ಯಾಂಡಲ್ ಅನ್ನು @Supportಗೆ ಬದಲಾಯಿಸಲಾಗಿದೆ. ಆದರೆ ಇದೀಗ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಆಗಿರುವ @Xನಿಜವಾಗಿ ಬೇರೆಯವರ ಹ್ಯಾಂಡಲ್ ಆಗಿದ್ದು, ಕಸ್ತೂರಿ ಒಂದೇ ಒಂದು ರೂಪಾಯಿ ನೀಡದೆ ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಇದೀಗ ಗೊಂದಲಕ್ಕೆ ಕಾರಣವಾಗಿದೆ. ಜೊತೆಗೆ ಮತ್ಯಾವ ಲೋಗೋವನ್ನು ಬೇರೆ ಘೋಷಣೆ ಮಾಡುತ್ತಾರಪ್ಪಾ ಎಂದು ಜನ ಆಲೋಚನೆ ಮಾಡುವಂತಾಗಿದೆ.
@X ಹ್ಯಾಂಡಲ್‌ನ ನಿಜವಾದ ಮಾಲೀಕ ಜೀನ್ ಎಕ್ಸ್ ಹ್ವಾಂಗ್ ಆಗಿದ್ದಾರೆ. @X ಹ್ಯಾಂಡಲ್ ಅನ್ನು 16 ವರ್ಷಗಳ ಹಿಂದೆ ಜೀನ್ ಎಕ್ಸ್ ಹ್ವಾಂಗ್ ಅವರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರು ಆರೆಂಜ್ ಫೋಟೋಗ್ರಫಿ ಹೆಸರಿನಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಮಸ್ಕ್ ಯಾವುದೇ ಪರಿಹಾರ ನೀಡದೆ ಈ ಲೋಗೋವನ್ನು ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಜೀನ್ ಎಕ್ಸ್ ಹ್ವಾಂಗ್ ಅವರು ಪ್ರತಿಕ್ರಿಯೆ ನೀಡಿ, ತಮ್ಮ ಹ್ಯಾಂಡಲ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಯಾವುದೇ ಎಚ್ಚರಿಕೆ ಸ್ವೀಕರಿಸಲಿಲ್ಲ. ಆದರೆ [email protected] ನಿಂದ ಇಮೇಲ್ ಅನ್ನು ಸ್ವೀಕರಿದ್ದು, ಅದರಲ್ಲಿ ಟ್ವಿಟ್ಟರ್ ಮೇಲೆ ಇರುವ ನಿಮ್ಮ ನಿಷ್ಠೆಗೆ ಧನ್ಯವಾದ. ಕೃತಜ್ಞತೆಯ ಭಾಗವಾಗಿ ಟ್ವಿಟ್ಟರ್ ಪ್ರಧಾನ ಕಚೇರಿಗೆ ಭೇಟಿ ನೀಡಿ ಎಂದು ಆಹ್ವಾನ ಮಾಡಲಾಗಿದೆಯಂತೆ.
ಇವರ ಖಾತೆಯು 53,000 ಅನುಯಾಯಿಗಳನ್ನು ಹೊಂದಿದ್ದು, ಇದೀಗ ಹ್ವಾಂಗ್ ಹ್ಯಾಂಡಲ್ ಅನ್ನು @x12345678998765 ಗೆ ಬದಲಾಯಿಸಲಾಗಿದೆ. ಇದರೊಂದಿಗೆ ಶೀಘ್ರದಲ್ಲೇ ಹ್ಯಾಂಗ್ ತಮ್ಮ ಇಚ್ಚೆಯ ಹ್ಯಾಂಡಲ್ ಅನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡಲಾಗಿದೆ. ಈ ಎಲ್ಲಾ ಕಾರಣಕ್ಕೆ ಈಗ ಹ್ವಾಂಗ್ ಬೇಸರ ಹೊರಹಾಕಿದ್ದಾರೆ. ಯಾವುದೇ ಚರ್ಚೆ ಅಥವಾ ಅಥವಾ ಹಣಕಾಸಿನ ಪರಿಹಾರವಿಲ್ಲದೆ ಕಂಪನಿಯು ಕೇವಲ ಹ್ಯಾಂಡಲ್ ಅನ್ನು ತೆಗೆದುಕೊಂಡಿದೆ ಎಂದು ಹ್ವಾಂಗ್ ಆರೋಪಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ [email protected] ಇಮೇಲ್ ವಿಳಾಸದಿಂದ ಮಾತ್ರ ಈ ಇಮೇಲ್ ಅನ್ನು ಸ್ವೀಕರಿಸಲಾಗಿದೆ. ಬದಲಾಗಿ ಯಾವುದೇ ಅಧಿಕೃತ ಉದ್ಯೋಗಿ ಅಥವಾ ಮುಖ್ಯಸ್ಥರು ನಮಗೆ ಇಮೇಲ್ ಮಾಡಿಲ್ಲ ಎಂದಿದ್ದಾರೆ. ಈ ನಡುವೆ ಕೆಲವರು ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದು, ಮಸ್ಕ್ ಟ್ವಿಟರ್ ಮಾಲೀಕರಾದ ನಂತರ ಇತರರ ಹ್ಯಾಂಡಲ್‌ಗಳನ್ನು ಸ್ವಾಧೀನಪಡಿಸಿಕೊಂಡಿರುವುದು ಇದೇ ಮೊದಲಲ್ಲ ಎಂದು ಉಲ್ಲೇಖ ಮಾಡಿದ್ದಾರೆ.
ಟ್ವಿಟರ್ ಲೋಗೋವನ್ನು X ಎಂದು ಮರುನಾಮಕರಣ ಮಾಡಲಾಗಿದೆಯಾದರೂ ಆ ಲೋಗೋದಿಂದ ಮಸ್ಕ್ ಸಂತೋಷವಾಗಿಲ್ಲವಂತೆ. ಈ ನಡುವೆ ಓರ್ವ ಬಳಕೆದಾರರಿಗೆ ನೀಡಿದ ಉತ್ತರದಲ್ಲಿ, ಲೋಗೋವು ಕಾಲದೊಂದಿಗೆ ವಿಕಸನಗೊಳ್ಳುತ್ತದೆ ಎಂದು ಉಲ್ಲೇಖಿಸಿದ್ದಾರೆ. ಮತ್ತೊಂದು ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, X ಶೀಘ್ರದಲ್ಲೇ ಡಾರ್ಕ್ ಮೋಡ್ ಅನ್ನು ಹೊಂದಿರುತ್ತದೆ ಎಂದು ಮಸ್ಕ್ ತಿಳಿಸಿದ್ದಾರೆ.
ಇದೆಲ್ಲದರ ನಡುವೆ ಟ್ವಿಟರ್ X ಲೋಗೋದ ಹಕ್ಕುಗಳನ್ನು ಪಡೆದುಕೊಂಡಿಲ್ಲ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ. ಸಾಮಾನ್ಯ ಈ ರೀತಿಯ ಹಿನ್ನಡೆಯ ಹೊರತಾಗಿಯೂ ಟ್ವಿಟರ್ ಅನ್ನು ಮರುಬ್ರಾಂಡ್ ಮಾಡುವ ಅವರ ನಡೆಯಲ್ಲಿ ಮಸ್ಕ್ ವಿಶ್ವಾಸ ಹೊಂದಿದ್ದು, X ಭೂಮಿಯ ಮೇಲಿನ ಅತ್ಯಮೂಲ್ಯ ಬ್ರಾಂಡ್ ಆಗಲಿದೆ ಎಂದು ಸಂತಸಹೊಂಡಿದ್ದಾರೆ. ಅದರಲ್ಲೂ ಲೋಗೋವನ್ನು X ಗೆ ಮರುಬ್ರಾಂಡ್ ಮಾಡಿದ ನಂತರ, ಲೋಗೋವನ್ನು ದಪ್ಪ ಗೆರೆಗಳೊಂದಿಗೆ ನವೀಕರಿಸಿ ಸಣ್ಣ ಬದಲಾವಣೆ ಮಾಡಿದ್ದಾರೆ.


Click it and Unblock the Notifications








