ಜಿಯೋ 5G ನಿಮ್ಮ ಫೋನಿನಲ್ಲಿ ಕಾರ್ಯನಿರ್ವಹಿಸುತ್ತದೆಯೇ?..ಹೀಗೆ ಚೆಕ್ ಮಾಡಿ!
ರಿಲಯನ್ಸ್ ಜಿಯೋ ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರತದಲ್ಲಿ ತನ್ನ 5G ಸೇವೆಗಳನ್ನು ಘೋಷಿಸಿದೆ. ಜಿಯೋ 5G ಸೇವೆಗಳನ್ನು ಮೊದಲು ಭಾರತದ ಆಯ್ದ ನಗರಗಳಲ್ಲಿ ಪ್ರಾರಂಭಿಸಲಾಗುವುದು ಮತ್ತು ನಂತರ ದೇಶದ ಎಲ್ಲಾ ಭಾಗಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ. ದೀಪಾವಳಿ ವೇಳೆಗೆ ಕೋಲ್ಕತ್ತಾ, ದೆಹಲಿ, ಮುಂಬೈ ಮತ್ತು ಚೆನ್ನೈ ಈ ನಾಲ್ಕು ನಗರಗಳು ಮೊದಲ ಜಿಯೋದ 5G ಸೇವೆಯ ಪಡೆಯಲಿವೆ.

ಆ ಬಳಿಕ ಡಿಸೆಂಬರ್ 2023 ರ ಅಂತ್ಯದ ವೇಳೆಗೆ ಪ್ರತಿ ತಾಲ್ಲೂಕ, ಪಟ್ಟಣ ಹಾಗೂ ಹಳ್ಳಿಗಳಿಗೂ ಜಿಯೋದ 5G ಸೇವೆ ಒದಗಿಸಲಾಗುವುದು ಎಂದು ಸಂಸ್ಥೆಯು ಹೇಳಿದೆ. ಹಾಗಿದ್ರೆ, ಇನ್ನೇನು ಜಿಯೋ 5G ನೆಟ್‌ವರ್ಕ್ ಬಂದೇ ಬಿಡ್ತು, ಆದರೆ, ಸದ್ಯ ಇರುವ ಸ್ಮಾರ್ಟ್‌ಫೋನ್‌ನಲ್ಲಿ 5G ಕಾರ್ಯನಿರ್ವಹಿಸುತ್ತದೆಯೇ ಅಥವಾ ಅಧಿಕ ವೇಗದ ಇಂಟರ್ನೆಟ್ ಅನ್ನು ಬಳಸಲು, ಹೊಸ ಫೋನ್ ಖರೀದಿಸಬೇಕೆ ಎನ್ನುವುದು ಬಹುತೇಕರಿಗೆ ಈಗ ದೊಡ್ಡ ಪ್ರಶ್ನೆ ಎನಿಸಿಕೊಂಡಿದೆ.

ನಿಮ್ಮ ಸ್ಮಾರ್ಟ್‌ಫೋನ್ 5G ಅನ್ನು ಬೆಂಬಲಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸುಲಭವಾದ ಮಾರ್ಗವಿದೆ. ಒಂದು ವೇಳೆ ನಿಮ್ಮ ಫೋನ್ 5G ನೆಟ್‌ವರ್ಕ್ ಅನ್ನು ಬೆಂಬಲಿಸದಿದ್ದರೆ, 10X ವೇಗವನ್ನು ಸೌಲಭ್ಯ ಪಡೆಯಲು ಹೊಸ ಫೋನ್ ಅನ್ನು ಹೊಂದಬೇಕಾಗುತ್ತದೆ. ಹಾಗಾದರೇ ನಿಮ್ಮ ಸ್ಮಾರ್ಟ್‌ಫೋನ್ 5G ಅನ್ನು ಬೆಂಬಲಿಸುತ್ತದೆಯೇ ಅಥವಾ ಇಲ್ಲವೇ ಚೆಕ್ ಮಾಡಲು ಹೀಗೆ ಮಾಡಿರಿ.

ಜಿಯೋದ 5G ಸೇವೆಯು ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆಯೇ ಹೀಗೆ ಚೆಕ್ ಮಾಡಿ:
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಆಪ್ ತೆರೆಯಿರಿ
ಹಂತ 2: 'Wi-Fi and Network' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ಈಗ 'SIM and Network' ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ಈಗ ನೀವು ಎಲ್ಲಾ ತಂತ್ರಜ್ಞಾನಗಳ ಪಟ್ಟಿಯನ್ನು 'Preferred network type' ಆಯ್ಕೆಯ ಅಡಿಯಲ್ಲಿ ಕಾಣಬಹುದಾಗಿದೆ.
ಹಂತ 5: ನಿಮ್ಮ ಫೋನ್ 5G ಅನ್ನು ಬೆಂಬಲಿಸಿದರೆ, ಅಲ್ಲಿ 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.

ಜಿಯೋ 5G ಸ್ಮಾರ್ಟ್‌ಫೋನ್ ಯಾವಾಗ ಬರುತ್ತೆ?
ರಿಲಯನ್ಸ್ ಜಿಯೋ 5G ಫೋನ್‌ಗಳನ್ನು ಪರಿಚಯಿಸಲು ಗೂಗಲ್‌ನೊಂದಿಗೆ ಕೆಲಸ ಮಾಡುತ್ತಿದೆ ಎಂದು ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ. ಆದರೆ ಇದೇ ವರ್ಷ ಈ ಸ್ಮಾರ್ಟ್‌ಫೋನ್ ಬಿಡುಗಡೆ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಏಕೆಂದರೆ ಈ ಸ್ಮಾರ್ಟ್‌ಫೋನ್ ಇನ್ನು ಕೂಡ ಅಭಿವೃದ್ದಿ ಹಂತದಲ್ಲಿ ಎಂದು ಹೇಳಲಾಗಿದೆ.

ಜಿಯೋ 5G ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಮತ್ತು ಆಂಟಿಫಿಂಗರ್‌ಪ್ರಿಂಟ್ ಹೊಂದಿರುವ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಜಿಯೋ ಕಂಪೆನಿ ತನ್ನ ಜಿಯೋ 5G ಫೋನ್‌ಗಾಗಿ ಕ್ವಾಲ್ಕಾಮ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ಹೇಳಲಾಗಿದೆ. ಇದು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 400 ಸರಣಿಯ ಚಿಪ್‌ಸೆಟ್ ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇದು ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್ 4GB RAM ಮತ್ತು 32GB ಇಂಟರ್ ಸ್ಟೋರೇಜ್ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ಯ ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ. ಜಿಯೋ ಫೋನ್ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿರುವ ಸಾದ್ಯತೆಯಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿರಲಿದೆ.

ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಇದು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ.

ವಾಟ್ಸಾಪ್‌ನಲ್ಲೇ ಜಿಯೋ ಮಾರ್ಟ್ ಶಾಪಿಂಗ್
ಇದೇ ಮೊದಲ ಬಾರಿಗೆ ವಾಟ್ಸಾಪ್‌ನಲ್ಲಿ ಶಾಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದ್ದು ಜಿಯೋ ಮಾರ್ಟ್ ಇನ್ನು ವಾಟ್ಸಾಪ್‌ನಲ್ಲೇ ಸಿಗಲಿದೆ. ವಾಟ್ಸಾಪ್‌ನಲ್ಲೇ ಜಿಯೋ ಮಾರ್ಟ್‌ನ ಎಲ್ಲ ದಿನಸಿ ಕ್ಯಾಟಲಾಗ್ ಕಾಣಿಸುತ್ತದೆ. ಅದರಲ್ಲೇ ಐಟಂಗಳನ್ನು ಕಾರ್ಟ್‌ಗೆ ಸೇರಿಸಬಹುದು ಮತ್ತು ಹಣ ಪಾವತಿಯನ್ನೂ ಮಾಡಬಹುದು.


Click it and Unblock the Notifications








