Windows 12: ವಿಂಡೋಸ್ 12 ಅಪ್‌ಗ್ರೇಡ್‌ಗೆ ಹಣ ಪಾವತಿ ಮಾಡಬೇಕೇ? ಲೀಕ್ ಮಾಹಿತಿಯಲ್ಲೇನಿದೆ?
ವಿಂಡೋಸ್ ಅನ್ನು 1985 ರಲ್ಲಿ ಪರಿಚಯಿಸಲಾಗಿದ್ದು, ಅಂದಿನಿಂದ ಅನೇಕ ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅದರಲ್ಲೂ ಹೆಚ್ಚಿನ ಹೊಸ ಪರ್ಸನಲ್ ಕಂಪ್ಯೂಟರ್‌ಗಳಲ್ಲಿ ಪೂರ್ವ ಲೋಡ್ ಆಗಿದ್ದು, ವಿಶ್ವದ ಅತ್ಯಂತ ಜನಪ್ರಿಯ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆದರೆ, ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ ವಿಂಡೋಸ್ 12 ಉಚಿತ ಅಪ್‌ಗ್ರೇಡ್‌ಗೆ ಲಭ್ಯವಿಲ್ಲವಂತೆ.
ಹೌದು, ಪಿಸಿ ಆಪರೇಟಿಂಗ್ ಸಿಸ್ಟಂನ ಮುಂದಿನ ಪ್ರಮುಖ ಆವೃತ್ತಿಯಾದ ವಿಂಡೋಸ್ 12 ಗಾಗಿ ಮೈಕ್ರೋಸಾಫ್ಟ್ ಪಾವತಿಸಿದ ಚಂದಾದಾರಿಕೆಯನ್ನು ಪರಿಚಯಿಸಲಾಗುತ್ತದೆ ಎನ್ನಲಾಗಿದೆ. ಹೊಸ ಸೋರಿಕೆ ನಿಜವಾಗಿದ್ದರೆ ಇದು ಸಾಮಾನ್ಯ ಬಳಕೆದಾರರನ್ನು ದೂರವಿಡುವುದು ಖಚಿತ ಎನ್ನಲಾಗಿದೆ. ಹಾಗಿದ್ರೆ, ಏನಿದು ಹೊಸ ವಿಷಯ? ಯಾಕೆ ಮೈಕ್ರೋಸಾಫ್ಟ್ ಈ ನಿರ್ಧಾರ ಮಾಡಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ವಿಂಡೋಸ್ 12 ಗೆ ಪಾವತಿ ಮಾಡಬೇಕೆ?: ಈ ವಿಷಯದ ಬಗ್ಗೆ ಜರ್ಮನ್‌ನ ವೆಬ್‌ಸೈಟ್ ಡೆಸ್ಕ್ಮೋಡರ್ (Deskmodder) ಮಾಹಿತಿ ಕಲೆಹಾಕಿದೆ. ಹೊಸ ವಿಂಡೋಸ್ ಬಿಲ್ಡ್‌ಗಾಗಿ ಕೋಡ್‌ನಲ್ಲಿ ಚಂದಾದಾರಿಕೆ ಕೇಂದ್ರಿತ ಭಾಷೆಯನ್ನು ಪತ್ತೆ ಮಾಡಿದೆ. ವಿನ್‌ಮರ್ಜ್ ಬಳಸಿಕೊಂಡು ವಿಂಡೋಸ್ 11 23H2 ಬಿಡುಗಡೆ ಪೂರ್ವವೀಕ್ಷಣೆ ನಿರ್ಮಾಣದೊಂದಿಗೆ ಹೋಲಿಸಿದಾಗ ಕ್ಯಾನರಿ ಚಾನಲ್ ಬಿಲ್ಡ್ನ INI ಕಾನ್ಫಿಗರೇಶನ್ ಫೈಲ್‌ನಲ್ಲಿ ಹಲವಾರು ಚಂದಾದಾರಿಕೆ ಸಂಬಂಧಿತ ನಮೂದುಗಳನ್ನು ಪತ್ತೆ ಮಾಡಿದೆ.
ಇನ್ನು ಈ ಚಂದಾದಾರಿಕೆ ವಿಷಯಗಳು ಕೋಡ್‌ನ ಕೆಲವು ಸಾಲುಗಳಿಂದ ತಿಳಿದುಬಂದಿದೆ. ಆದರೆ, ಅದರೆ ಅದರಲ್ಲಿ ಏನನ್ನೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ಇಲ್ಲ. ಕೆಲವು ಇಂಗ್ಲಿಷ್‌ನಲ್ಲಿ ಇದ್ದರೆ ಇನ್ನೂ ಕೆಲವು ಜರ್ನನ್ ಭಾಷೆಯಲ್ಲಿವೆ. ಅಷ್ಟೇ ಅಲ್ಲದೆ ವಿಂಡೋಸ್ 12 ಬಗ್ಗೆಯೂ ಸಹ ಮೈಕ್ರೋಸಾಫ್ಟ್ ಇನ್ನೂ ಯಾವುದೇ ಮಾಹಿತಿ ದೃಢೀಕರಿಸಿಲ್ಲ. ಅಕಸ್ಮಾತ್ ಅದು ಅಸ್ತಿತ್ವದಲ್ಲಿದ್ದರೆ ಅದರ ಬಿಡುಗಡೆಯ ನಂತರ ಅದನ್ನು ಸಂಪೂರ್ಣವಾಗಿ ಬೇರೆ ಹೆಸರಲ್ಲಲಿ ಕರೆಯಬಹುದು ಎನ್ನಲಾಗಿದೆ.
ಈ ಬಗ್ಗೆ XDA ಸಹ ತನ್ನದೇ ಆದ ಮಾಹಿತಿ ಉಲ್ಲೇಖ ಮಾಡಿದ್ದು, ಇದು 2024 ರಲ್ಲಿ ಪ್ರಾರಂಭ ಆಗಬಹುದು ಎಂಬ ಅಂಶವನ್ನು ಹೊರತುಪಡಿಸಿ ವಿಂಡೋಸ್‌ನ ಮುಂದಿನ ಆವೃತ್ತಿಯ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಆದರೆ, ಅದು ಇಲ್ಲದೆಯೂ ಇರಬಹುದು, ಯಾರಿಗೆ ಗೊತ್ತು? ಎಂದು ಪ್ರಶ್ನೆ ಹಾಕಿದೆ. ಈ ಮೂಲಕ ಟೆಕ್ ಪ್ರಿಯರ ತಲೆಗೆ ಹುಳ ಬಿಟ್ಟಿದೆ. ಹಾಗೆಯೇ ವಿಂಡೋಸ್‌ನ ಕನ್ಸೂಮರ್-ಫೇಸಿಂಗ್ ವರ್ಷನ್ ಆವೃತ್ತಿಗೆ ಬದಲಾವಣೆಯಾಗಿರುವುದು ಕಂಡುಬಂದಿದ್ದು, ಮೈಕ್ರೋಸಾಫ್ಟ್ ಸದ್ಯಕ್ಕೆ ವಿಂಡೋಸ್ 11 ಅರ್ಹ ಪಿಸಿ ಗಳನ್ನು ಹೊಂದಿರುವ ವಿಂಡೋಸ್ 10 ಬಳಕೆದಾರರಿಗೆ ಪೂರಕ ವಿಂಡೋಸ್ 11 ನವೀಕರಣಗಳನ್ನು ನೀಡುವ ಕೆಲಸ ಮಾಡುತ್ತಿದೆ.
ಈವರೆಗೂ ಮೈಕ್ರೋಸಾಫ್ಟ್ ಯಾವಾಗಲೂ ಪ್ರಸ್ತುತ ವಿಂಡೋಸ್ ಬಳಕೆದಾರರಿಗೆ ಉಚಿತ ಅಪ್‌ಗ್ರೇಡ್ ಅನ್ನು ನೀಡುತ್ತದೆ. ಆದ್ದರಿಂದ ಕಂಪನಿಯು ಈ ಚಂದಾದಾರಿಕೆ-ಆಧಾರಿತ ಮಾದರಿ ವ್ಯವಸ್ಥೆಗೆ ಕಾಲಿಟ್ಟರೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ. ಆದರೂ ಸಹ ಇವೆಲ್ಲವೂ ಇದೀಗ ವಿಂಡೋಸ್ 12 ಬಗ್ಗೆ ವದಂತಿ ಎನ್ನಲಾಗಿದೆ. ಇನ್ನೇನು ಶೀಘ್ರದಲ್ಲೇ ಇದು ಘೋಷಣೆ ಆಗುವುದರಿಂದ ದೃಢೀಕರಣಕ್ಕಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ.
ಅದಾಗ್ಯೂ ಮೈಕ್ರೋಸಾಫ್ಟ್‌ನ ಈ ಕ್ರಮವು ಹೆಚ್ಚು ವ್ಯಾಪಕವಾದ ಲಿನಕ್ಸ್ ಅಳವಡಿಕೆಗೆ ಕಾರಣವಾಗಬಹುದು ಎನ್ನಲಾಗಿದೆ. ವಿಶೇಷವಾಗಿ ಡೆಸ್ಕ್‌ಟಾಪ್ ಲಿನಕ್ಸ್ ಅಂತಿಮವಾಗಿ ಬಳಕೆಯ ಸುಲಭತೆಗಾಗಿ ವಿಂಡೋಸ್‌ಗೆ ಪ್ರತಿಸ್ಪರ್ಧಿಯಾಗಲು ಈಗಾಗಲೇ ಸಜ್ಜಾಗಿದೆ. ಇದಿಷ್ಟು ಮಾತ್ರವಲ್ಲದೆ ಇದೇ ರೀತಿಯ ಚಂದಾದಾರಿಕೆ ಕ್ರಮಗಳು ನಿಜವೇ ಆದರೆ ಬೇರೆ ಓಎಸ್‌ಗಳು ಮುನ್ನೆಲೆಗೆ ಬರುವುದರಲ್ಲಿ ಎರಡು ಮಾತಿಲ್ಲ.

ಕ್ಲೌಡ್ ಮೈಕ್ರೋಸಾಫ್ಟ್: ಉಳಿದಂತೆ ಕ್ಲೌಡ್‌ನಲ್ಲಿ ಮೈಕ್ರೋಸಾಫ್ಟ್ ಬಳಕೆ ಮಾಡುವ ವಿಚಾರ ಅದೆಷ್ಟೋ ಜನರಿಗೆ ತಿಳಿದೇ ಇಲ್ಲ. ಕಂಪನಿಯು ವಿಂಡೋಸ್ 365 ಅನ್ನು 2021 ರ ಮಧ್ಯದಲ್ಲಿ ಲಾಂಚ್ ಮಾಡಿದ್ದು, ವೆಬ್ ಬ್ರೌಸರ್ ಹೊಂದಿರುವ ಯಾರಾದರೂ ಕ್ಲೌಡ್‌ನಲ್ಲಿ ವಿಂಡೋಸ್ ನಕಲನ್ನು ಚಲಾಯಿಸಲು ಅನುವು ಮಾಡಿಕೊಡುತ್ತದೆ. ದುರದೃಷ್ಟವಶಾತ್ ಅನೇಕ ಬಳಕೆದಾರರು ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಕ್ಲೌಡ್‌ನಿಂದ ಚಲಾಯಿಸಲು ಆಸಕ್ತಿಯನ್ನೇ ಹೊಂದಿಲ್ಲ. ಏಕೆಂದರೆ ಗೌಪ್ಯತೆ, ಭದ್ರತೆ, ಇಂಟರ್ನೆಟ್ ಪ್ರವೇಶ ಅಥವಾ ವೆಚ್ಚಗಳ ಬಗ್ಗೆ ಬಳಕೆದಾರರಿಗೆ ಇರುವ ಕಳವಳ.


Click it and Unblock the Notifications








