ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಲು ಹೋಗಿ ಭಾರೀ ಹಣ ಕಳೆದುಕೊಂಡ ಮಹಿಳೆ!
ಸ್ವಿಗ್ಗಿ, ಜೊಮೊಟೊ ಸೇರಿದಂತೆ ಹಲವಾರು ಆಪ್‌ಗಳು ಆನ್‌ಲೈನ್ ಫುಡ್ ಆರ್ಡರ್‌ಗೆ ಹೆಸರುವಾಸಿಯಾಗಿವೆ. ಈ ಮೂಲಕ ರುಚಿ ಎನಿಸುವ ಆಹಾರವನ್ನು ಇಷ್ಟವಾದ ಹೋಟೆಲ್‌ನಿಂದಲೇ ತರಿಸಿಕೊಂಡು ಸ್ವಾಧಿಸುವ ಮಂದಿ ಹೆಚ್ಚಾಗುತ್ತಿದ್ದಾರೆ. ಈ ನಡುವೆ ಮಹಿಳೆಯೋರ್ವರು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಲು ಹೋಗಿ ಭಾರೀ ಹಣ ಕಳೆದುಕೊಂಡಿದ್ದಾರೆ.
ಹೌದು, ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದ ದೆಹಲಿ ಮಹಿಳೆ ಸುಮಾರು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇವರು ಆನ್‌ಲೈನ್‌ನಲ್ಲಿ ಒಂದು ಖರೀದಿಸಿದರೆ ಒಂದು ಉಚಿತ ಎಂದು ಕಾಣಿಸಿಕೊಂಡಿದ್ದ ಥಾಲಿ ಬಗ್ಗೆ ಭಾರೀ ಉತ್ಸುಕರಾಗಿ ಆರ್ಡರ್ ಮಾಡಲು ಮುಂದಾಗಿದ್ದ ವೇಳೆ ಈ ವಂಚನೆ ನಡೆದಿದೆ. ಹಾಗಿದ್ರೆ, ಈ ಘಟನೆ ನಡೆದಿದ್ದು ಹೇಗೆ?, ಸ್ಕ್ಯಾಮರ್‌ಗಳು ಈ ಮಹಿಳೆಗೆ ಹೇಗೆಲ್ಲಾ ವಂಚನೆ ಮಾಡಿದರು ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳ ನಡುವೆ ಭಾರೀ ರಿಯಾಯಿತಿ ಅಥವಾ ಒಂದನ್ನು ಕೊಂಡರೆ ಮತ್ತೊಂದು ಉಚಿತ ಎನ್ನುವುದನ್ನು ಅಷ್ಟು ಸುಲಭವಾಗಿ ನಂಬಬೇಡಿ. ಯಾಕೆಂದರೆ ಒಂದು ಥಾಲಿ ಖರೀದಿಸಿ, ಇನ್ನೊಂದನ್ನು ಉಚಿತವಾಗಿ ಪಡೆಯಿರಿ ಎಂಬ ಆಕರ್ಷಣೀಯ ಆಹಾರದ ಜಾಹೀರಾತು ಗಮನಿಸಿ ದೆಹಲಿಯ ಮಹಿಳೆ ಸ್ಕ್ಯಾಮರ್‌ಗಳ ಬಲೆಗೆ ಬಿದ್ದಿದ್ದಾರೆ. ಈ ಮೂಲಕ 1 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಮೋಸ ಹೋದವರು ಯಾರು?: ನೈಋತ್ಯ ದೆಹಲಿಯ 40 ವರ್ಷದ ಮಹಿಳೆ ಸವಿತಾ ಶರ್ಮಾ ಎಂಬುವರು ಬ್ಯಾಂಕ್‌ನಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದು, ಫೇಸ್‌ಬುಕ್‌ನಲ್ಲಿ ಸಂಬಂಧಿಕರೊಬ್ಬರ ಮೂಲಕ ಉಚಿತ ಆಹಾರ ವಿತರಣೆಯ ಆಫರ್ ಗಮನಿಸಿದ್ದಾರೆ. ಆಫರ್‌ನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅವರು ಫೇಸ್‌ಬುಕ್‌ನಲ್ಲಿ ಲಭ್ಯವಿರುವ ವೆಬ್‌ಸೈಟ್ ಲಿಂಕ್‌ಗೆ ಭೇಟಿ ನೀಡಿದ್ದಾರೆ. ಹಾಗೆಯೇ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅಲ್ಲಿ ನೀಡಲಾಗಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ.
ಶರ್ಮಾ ಅವರು ಮಾಡಿದ ಮೊದಲ ಕರೆಯಲ್ಲಿ ಯಾವುದೇ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲವಂತೆ. ಇದಾದ ಬಳಿಕ ಅವರ ನಂಬರ್‌ಗೆ ಒಂದು ಕರೆ ಬರುತ್ತದೆ ಅದರಲ್ಲಿ ಜನಪ್ರಿಯ ರೆಸ್ಟೋರೆಂಟ್ ಸಾಗರ್ ರತ್ನದಲ್ಲಿ ಆಫರ್ ಅನ್ನು ಪಡೆಯಲು ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಕರೆ ಮಾಡಿದವರು ಮಾಹಿತಿ ನೀಡಿದ್ದಾರೆ. ಈ ವೇಳೆ ಅವರು ಒಂದು ಲಿಂಕ್ ಅನ್ನೂ ಸಹ ಶೇರ್ ಮಾಡಿದ್ದಾರೆ.

ಲಿಂಕ್ ಮೂಲಕ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ಅದನ್ನು ಓಪನ್ ಮಾಡಿದಾಗ ಐಡಿ ಮತ್ತು ಪಾಸ್‌ವರ್ಡ್ ಕೇಳಿದೆ. ಈ ವೇಳೆ ಫುಡ್ ಆಫರ್ ಪಡೆದುಕೊಳ್ಳುವ ಉದ್ದೇಶದಿಂದಾಗಿ ಶರ್ಮಾ ಅವರು ಆಪ್ ನೋಂದಣಿ ಪ್ರಕ್ರಿಯೆ ನಡೆಸಿದ್ದಾರೆ. ಬಳಿಕ ಲಾಗಿನ್ ಆಗಿದ್ದಾರೆ. ಇದಾದ ನಂತರ ತಕ್ಷಣವೇ ಶರ್ಮಾ ಅವರ ಫೋನ್ ಹ್ಯಾಕ್ ಆಗಿದೆ. ಈ ಮೂಲಕ ಅವರ ಖಾತೆಯಲ್ಲಿದ್ದ 40 ಸಾವಿರ ರೂ. ಗಳು ಡೆಬಿಟ್ ಆಗಿದೆ. ಈ ಸಂಬಂಧ ಅವರು ಮೆಸೆಜ್‌ಅನ್ನೂ ಸಹ ಸ್ವೀಕರಿಸಿದ್ದಾರೆ.
ಇದೇ ಆತಂಕದಲ್ಲಿದ್ದ ಶರ್ಮಾ ಅವರಿಗೆ ಮತ್ತೊಂದು ಮೆಸೆಜ್ ಬರುತ್ತದೆ. ಅದರಲ್ಲಿ ಅವರ ಖಾತೆಯಿಂದ ಐವತ್ತು ಸಾವಿರ ಡೆಬಿಟ್ ಆಗಿರುವ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಇನ್ನು ಹ್ಯಾಕ್ ಆದ ನಂತರ, ಸ್ಕ್ಯಾಮರ್ ಮೊದಲು ಕ್ರೆಡಿಟ್ ಕಾರ್ಡ್‌ನಿಂದ ಪೇಟಿಎಂಗೆ ಹಣವನ್ನು ವರ್ಗಾಯಿಸಿದ್ದಾನೆ. ಬಳಿಕ ಅದನ್ನು ಅವರ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ. ಜೊತೆಗೆ ನಾನು ಬ್ಯಾಂಕ್ ಸಂಬಂಧ ಯಾವುದೇ ವಿವರಗಳನ್ನು ಕರೆ ಮಾಡಿದವರೊಂದಿಗೆ ಹಂಚಿಕೊಂಡಿರಲಿಲ್ಲ ಎಂದೂ ಸಹ ತಿಳಿಸಿದ್ದಾರೆ.

ಇಷ್ಟೆಲ್ಲಾ ಘಟನೆಗಳು ಸಂಭವಿಸಿದ ನಂತರ ತಕ್ಷಣವೇ ತನ್ನ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಇನ್ನು ಪ್ರಮುಖ ವಿಷಯ ಏನೆಂದರೆ ಉಚಿತ ಆಹಾರದ ಆಫರ್‌ಗೆ ಬಿದ್ದ ಮೊದಲ ವ್ಯಕ್ತಿ ಶರ್ಮಾ ಅಲ್ಲ. ಕೆಲವು ಮಾಧ್ಯಮ ವರದಿಗಳ ಪ್ರಕಾರ ದೇಶಾದ್ಯಂತ ಇತರ ನಗರಗಳಿಂದ ಇದೇ ರೀತಿಯ ಹಲವಾರು ವಂಚನೆ ಪ್ರಕರಣಗಳು ವರದಿಯಾಗಿವೆ ಈ ಮೂಲಕ ಜನರು ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.


Click it and Unblock the Notifications








