Women's Day 2024: ಮಹಿಳೆಯರ ಸುರಕ್ಷತೆ ಹೆಚ್ಚಿಸಲಿವೆ ವಾಟ್ಸಾಪ್‌ನಲ್ಲಿನ ಈ ಫೀಚರ್ಸ್
ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನವನ್ನ (Women's Day 2024) ನಾಳೆ ಆಚರಣೆ ಮಾಡಲಾಗುತ್ತದೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಅಗ್ರಸ್ಥಾನ ಪಡೆದಿದ್ದು, ಬೆಂಗಳೂರಂತ ಮಹಾನಗರದಲ್ಲಿ ನಿರ್ಭಯವಾಗಿ ಆಟೋ ಓಡಿಸುವಷ್ಟು ಸಾಮರ್ಥ್ಯ ಪಡೆದಿದ್ದಾರೆ ಎಂದರೆ ಅವರಿಗೆ ಸಲಾಂ ಎನ್ನಲೇಬೇಕು. ಅಷ್ಟರ ಮಟ್ಟಿಗೆ ಇಂದು ಮಹಿಳೆಯರು ಸ್ವಾವಲಂಭಿಗಳಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಹೌದು, ಮಹಿಳೆಯರ ಸಾಧನೆಗಳ ಬಗ್ಗೆ ವರ್ಣನೆ ಮಾಡಲು ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಆದರೆ, ಕೆಲವರು ಇಂದೂ ಸಹ ಮಹಿಳೆಯರನ್ನು ಬೇರೆಯದೇ ರೀತಿಯಲ್ಲಿ ನೋಡುತ್ತಿದ್ದಾರೆ. ಅದರಲ್ಲೂ ಇಂಟರ್ನೆಟ್ ಬಳಕೆ ಹೆಚ್ಚಾದ ಮೇಲೆ ಅವರಿಗೆ ವಿವಿಧ ರೀತಿಯಲ್ಲಿ ಸಮಸ್ಯೆಗಳು ಸಹ ನಿರ್ಮಾಣ ಆಗುತ್ತಿವೆ. ಈ ನಡುವೆ ಎಲ್ಲರೂ ವಾಟ್ಸಾಪ್ ಬಳಕೆ ಮಾಡುವುದು ಸಾಮಾನ್ಯವಾದ ವಿಚಾರವಾಗಿದ್ದು, ಈ ಆಪ್ ಮೂಲಕ ಮಹಿಳೆಯರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಬಹುದಾಗಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಫೀಚರ್ಸ್ ಮಹಿಳೆಯರ ಸುರಕ್ಷತೆ ಹೆಚ್ಚಿಸಲಿವೆ ಅನ್ನೋದನ್ನು ನೋಡೋಣ.

ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್ಸ್: ವಾಟ್ಸಾಪ್ ಎಲ್ಲಾ ಬಳಕೆದಾರರಿಗೂ ಸಹ ವಿಶೇಷವಾದ ಭದ್ರತಾ ಫೀಚರ್ಸ್ ಆಯ್ಕೆ ನೀಡಿದೆ. ಈ ಫೀಚರ್ಸ್‌ಗಳು ಹೆಚ್ಚಾಗಿ ಮಹಿಳೆಯರಿಗೆ ಅನ್ವಯ ಆಗಲಿದೆ ಎಂದರೆ ತಪ್ಪಾಗಲಾರದು. ವಾಟ್ಸಾಪ್‌ನಲ್ಲಿ ಬಹಳಷ್ಟು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪ್ರತಿದಿನ ಸಂವಹನ ನಡೆಸಲಾಗುತ್ತದೆ. ಆದರೆ, ಇದನ್ನು ಬಳಕೆ ಮಾಡುವಾಗ ನೀವು ಎಷ್ಟು ಸುರಕ್ಷಿತವಾಗಿದ್ದೀರಿ ಅನ್ನೋದು ಪ್ರಮುಖವಾದ ವಿಷಯವಾಗಿದೆ. ಅದರಂತೆ ಚಾಟ್‌ಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ಐದು ವಾಟ್ಸಾಪ್ ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.
ಯಾರೊಂದಿಗೆ ಸಂವಹನ ಮಾಡಬೇಕು ಅನ್ನೋ ನಿರ್ಧಾರ: ಕೆಲವೊಮ್ಮೆ ನಿಮಗೆ ಪರಿಚಯವಿಲ್ಲದ ಜನರು ಇಷ್ಟವಿಲ್ಲದ ಮೆಸೆಜ್‌ಗಳನ್ನು ಕಳುಹಿಸಬಹುದು. ಇದಕ್ಕಾಗಿ ನೀವು ಯಾವುದೇ ಚಿಂತೆ ಮಾಡುವ ಅಗತ್ಯ ಇಲ್ಲ. ನೀವು ಅಂತಹ ಜನರನ್ನು ನಿರ್ಬಂಧಿಸಬಹುದು ಮತ್ತು ವರದಿ ಮಾಡಬಹುದು. ಒಮ್ಮೆ ನೀವು ಯಾರನ್ನಾದರೂ ನಿರ್ಬಂಧಿಸಿದರೆ, ಅವರು ನಿಮಗೆ ಕರೆ ಮಾಡಲು ಅಥವಾ ನಿಮಗೆ ಮೆಸೆಜ್‌ಗಳನ್ನು ಕಳುಹಿಸಲು ಆಗುವುದಿಲ್ಲ.
ನಿಮ್ಮ ಮಾಹಿತಿಯನ್ನು ಯಾರು ನೋಡಬೇಕು ಅನ್ನೋದನ್ನು ನೀವೇ ನಿರ್ಧರಿಸಿ: ನಿಮ್ಮ ಫೋಟೋ, ನೀವು ಕೊನೆಯ ಬಾರಿ ಆನ್‌ಲೈನ್‌ನಲ್ಲಿದ್ದಾಗ ಮತ್ತು ನಿಮ್ಮ ಸ್ಟೇಟಸ್ ನವೀಕರಣಗಳಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ಯಾರು ನೋಡಬಹುದು ಎಂಬುದನ್ನು ಆಯ್ಕೆ ಮಾಡಲು ವಾಟ್ಸಾಪ್ ನಿಮಗೆ ಅನುಮತಿಸುತ್ತದೆ. ನೀವು ಈ ವೇಳೆ ಎಲ್ಲಾ ವಾಟ್ಸಾಪ್ ಬಳಕೆದಾರರು ವೀಕ್ಷಣೆ ಮಾಡಲು ಅವಕಾಶ ನೀಡಬಹುದು ಅಥವಾ ಕೇವಲ ನಿಮ್ಮ ಸಂಪರ್ಕಗಳು, ಆಯ್ಕೆಮಾಡಿದ ಸ್ನೇಹಿತರು ಅಥವಾ ಯಾರೂ ನೋಡಲೇಬಾರದು ಎಂಬ ಆಯ್ಕೆಯನ್ನೂ ಬಳಕೆ ಮಾಡಬಹುದು.

ನಿಮ್ಮ ಖಾಸಗಿ ಚಾಟ್‌ಗಳನ್ನು ಲಾಕ್ ಮಾಡಿ: ಯಾರೇ ಆದರೂ ಸಹ ಅವರಿಗೆ ಒಂದು ಖಾಸಗಿ ಬದುಕು ಇದ್ದೇ ಇರುತ್ತದೆ. ಈ ವೇಳೆ ಕೆಲವು ಚಾಟ್‌ಗಳು ತುಂಬಾ ಖಾಸಗಿಯಾಗಿಯೂ ಇರಲಿವೆ. ಜೊತೆಗೆ ಆ ಮೆಸೆಜ್‌ಗಳನ್ನು ಖಾಸಗಿಯಾಗೇ ಇಡಲು ಬಯಸಿದರೆ ವಾಟ್ಸಾಪ್ ಚಾಟ್ ಲಾಕ್ ಎಂಬ ಫೀಚರ್ಸ್ ಬಳಕೆ ಮಾಡಬಹುದು. ಇದು ಅತ್ಯಂತ ಖಾಸಗಿ ಚಾಟ್‌ಗಳಿಗೆ ಪಾಸ್‌ವರ್ಡ್ ಆಯ್ಕೆ ನೀಡುತ್ತದೆ. ಬೇರೆ ಯಾರೇ ಆದರೂ ಸಹ ನಿಮ್ಮ ಫೋನ್ ಅನ್ನು ಪಡೆದು ಈ ಚಾಟ್‌ಗಳನ್ನು ನೋಡಲು ಮುಂದಾದರೆ ಖಂಡಿತಾ ಸಾಧ್ಯ ಆಗುವುದಿಲ್ಲ.
ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿ: ವಾಟ್ಸಾಪ್ ಎರಡು-ಹಂತದ ಪರಿಶೀಲನೆ ಫೀಚರ್ಸ್ ಅನ್ನು ಹೊಂದಿದೆ. ಬೇರೆ ಯಾರಾದರೂ ನಿಮ್ಮ ಖಾತೆ ಓಪನ್ ಮಾಡಲು ಮುಂದಾದರೆ ಆರು-ಅಂಕಿಯ ಪಿನ್ ಅನ್ನು ಎಂಟ್ರಿ ಮಾಡಬೇಕು. ನಿಮ್ಮ ಪಾಸ್‌ವರ್ಡ್ ಗೊತ್ತಿದ್ದರೂ ಸಹ ಈ ಪಿನ್ ಇಲ್ಲದೆ ಅವರು ನಿಮ್ಮ ಖಾತೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ. ಇದರಿಂದ ಯಾರಾದರೂ ನಿಮ್ಮ ವಾಟ್ಸಾಪ್ ಖಾತೆಗೆ ಕನ್ನ ಹಾಕಲು ಮುಂದಾದರೆ ಅವರಿಂದ ರಕ್ಷಣೆ ಪಡೆಯಬಹುದು.

ಅದೃಶ್ಯವಾಗುವ ಮೆಸೆಜ್‌ಗಳು: ನೀವು ಯಾರೊಂದಿಗಾದರೂ ಸಂವಹನ ನಡೆಸುವಾಗ ಅವರು ನಿಮ್ಮ ಮೆಸೆಜ್‌ಗಳನ್ನು ಸ್ಟೋರ್ ಮಾಡಬಾರದು ಅಥವಾ ಬೇರೆ ಸಮಯದಲ್ಲಿ ಅವುಗಳನ್ನು ಬಳಕೆ ಮಾಡಬಾರದು ಎಂದರೆ ಈ ಫೀಚರ್ಸ್ ಬಳಕೆ ಮಾಡಬಹುದು. ಇದು ಸ್ಟೋರೇಜ್ ವಿಷಯದಲ್ಲೂ ಸಹ ಸಹಾಯಕವಾಗುತ್ತದೆ. ಈ ಮೆಸೆಜ್‌ಗಳನ್ನು ಓದಿದ ನಿಗದಿತ ಸಮಯದ ನಂತರ ಕಣ್ಮರೆಯಾಗುತ್ತವೆ.


Click it and Unblock the Notifications








