ಶಿಯೋಮಿ ಇಂಡಿಯಾದಿಂದ ಹಿರಿಯ ನಾಗರಿಕರಿಗೆ ಗುಡ್‌ನ್ಯೂಸ್: ಮನೆಯಲ್ಲಿಯೇ ಫೋನ್ ಸೆಟಪ್ ಸೇವಾ ಬೆಂಬಲ
ಶಿಯೋಮಿ ಕಂಪೆನಿಯು ನಿನ್ನೆಯಷ್ಟೇ ಜಾಗತಿಕ ಮಾರುಕಟ್ಟೆಯಲ್ಲಿ ಶಿಯೋಮಿ ಬ್ಯಾಂಡ್ 8, ಶಿಯೋಮಿ 13 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಮೂಲಕ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಹಿರಿಯ ನಾಗರೀಕರಿಗೆ ವಿಶೇಷವಾದ ಕೊಡುಗೆಯನ್ನು ಘೋಷಣೆ ಮಾಡಿದೆ. ಈ ಮೂಲಕ ಭಾರತದ ಹಿರಿಯ ನಾಗರೀಕರು ಹಾಗೂ ಇತರೆ ಗ್ರಾಹಕರ ಮನಗೆಲ್ಲಲು ಮುಂದಾಗಿದೆ.
ಹೌದು, ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಟಿವಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಶಿಯೋಮಿ ಇಂಡಿಯಾ, ದೇಶದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡಿದ್ದು, ಸ್ಮಾರ್ಟ್‌ಫೋನ್ ಹೊಂದಿರುವ ಹಿರಿಯ ನಾಗರೀಕರ ಮನೆಗೆ ಹೋಗಿ ಫೋನ್ ಬೆಂಬಲ ಸೇವೆ (phone setup service support) ನೀಡಲು ಮುಂದಾಗಿದೆ. ಹಾಗಿದ್ರೆ, ಶಿಯೋಮಿಯ ಈ ಹೊಸ ನಿರ್ಧಾರದ ಬಗ್ಗೆ ಹಾಗೂ ಇದಕ್ಕೆ ತಗಲುವ ವೆಚ್ಚ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏನಿದು ಫೋನ್ ಬೆಂಬಲ ಸೇವೆ?: ಹಿರಿಯ ನಾಗರೀಕರು ಇತ್ತೀಚಿನ ಸ್ಮಾರ್ಟ್‌ಫೋನ್ ಬಳಕೆ ಮಾಡಲು ಖಂಡಿತಾ ಕಷ್ಟಪಡುತ್ತಾರೆ. ಅಷ್ಟರಮಟ್ಟಿಗೆ ವಿವಿಧ ಫೀಚರ್ಸ್‌ಗಳ ಆಯ್ಕೆಯನ್ನು ನೀಡಲಾಗುತ್ತದೆ. ಈ ಕಾರಣಕ್ಕೆ ಅವರ ಮನೆ ಬಾಗಿಲಿಗೆ ಹೋಗಿ ಸ್ಮಾರ್ಟ್‌ಫೋನ್ ಅನ್ನು ಅವರಿಗೆ ಬೇಕಾದ ರೀತಿಯಲ್ಲಿ ಹೊಂದಿಸಿಕೊಡುತ್ತಾರೆ. ಅಂದರೆ ಸಿಮ್ ಸೇರಿಸುವ ಕೆಲಸ ಇರಬಹುದು, ಡಾಟಾ ವರ್ಗಾವಣೆ ಇರಬಹುದು, ಆಪ್‌ಗಳ ಬಳಕೆಯಾಗಿರಬಹುದು. ಇದನ್ನೆಲ್ಲಾ ಕೂಲಂಕಷವಾಗಿ ಅವರಿಗೆ ಹೇಳಿಕೊಡಲಾಗುತ್ತದೆ.
ಈ ಸೇವೆಯನ್ನು ಪಡೆಯುವುದೇಗೆ?: ಈ ಸೇವೆಗಳನ್ನು ಪಡೆಯಲು ಗ್ರಾಹಕರು ಕೆಲವು ಸರಳ ಹಂತಗಳನ್ನು ಅನುಸರಿಸಬಹುದಾಗಿದೆ. ಅಂದರೆ, ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಈ ವಿಭಾಗಕ್ಕೆ ಎಂಟ್ರಿ ಆಗಬಹುದಾಗಿದ್ದು, ಇದಾದ ನಂತರ ಅಗತ್ಯ ಮಾಹಿತಿಯನ್ನು ಇಲ್ಲಿ ಭರ್ತಿ ಮಾಡಲು ಕೇಳಲಾಗುತ್ತದೆ. ಇದರಲ್ಲಿ ಅಪೇಕ್ಷಿತ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ನೀವು ಆ ವಿಭಾಗದಲ್ಲಿ ವೈಯಕ್ತಿಕ ವಿವರಗಳನ್ನು ಸಲ್ಲಿಸಿದ ನಂತರ ಶಿಯೋಮಿ ಸೇವಾ ಪ್ರತಿನಿಧಿಯು ಗ್ರಾಹಕರಿಗೆ ಕರೆ ಮಾಡಿ, ಪಿನ್ ಕೋಡ್ ಅನ್ನು ಪರಿಶೀಲಿಸುವ ಮೂಲಕ ಸೇವೆಯ ಪ್ರಕಾರ ಮತ್ತು ಅರ್ಹತೆಯನ್ನು ಪರಿಶೀಲಿಸುತ್ತಾರೆ. ಬಳಿಕ ಶಿಯೋಮಿ ಸೇವಾ ಪ್ರತಿನಿಧಿಯು ಶೀಘ್ರವಾಗಿ ಅವರ ಮನೆ ಬಾಗಿಲಿಗೆ ಬರುತ್ತಾರೆ. ಇದರ ನಡುವೆ ಗ್ರಾಹಕರು ಹಾಟ್‌ಲೈನ್ ಸಂಖ್ಯೆ 1800-103-6286 ಮತ್ತು ವಾಟ್ಸಾಪ್ ಸಂಖ್ಯೆ 8861826286 ಗೆ ಮಾಹಿತಿ ನೀಡುವ ಮೂಲಕ ಟೋಕನ್‌ಗಳನ್ನು ಸಹ ಪಡೆದುಕೊಳ್ಳಬಹುದು.
ಈ ಸಂಬಂಧ ಶಿಯೋಮಿ ಇಂಡಿಯಾ ಅಧ್ಯಕ್ಷ ಮುರಳಿಕೃಷ್ಣನ್ ಮಾಹಿತಿ ನೀಡಿದ್ದು, ನಮ್ಮ ಗ್ರಾಹಕರಿಗೆ ಅವರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸಲು ನವೀನ ಮತ್ತು ಕಸ್ಟಮೈಸ್ ಮಾಡಿದ ಪರಿಹಾರಗಳನ್ನು ಒದಗಿಸಲು ನಾವು ಮುಂದಾಗಿದ್ದೇವೆ. ಅದರಲ್ಲೂ ಈ ಸೇವೆಯನ್ನು ನಮ್ಮ ಹಿರಿಯ ನಾಗರಿಕ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಯಾಕೆಂದರೆ ಅವರು ವಿವಿಧ ಕಾರಣಗಳಿಗಾಗಿ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿರಬಹುದು ಎಂದು ತಿಳಿಸಿದ್ದಾರೆ.
ಸೀಮಿತ ಅವಧಿಗೆ ಉಚಿತ ಸೇವೆ: ಈ ಸೇವೆಯು ಸೀಮಿತ ಅವಧಿಗೆ ಉಚಿತವಾಗಿದ್ದು, ತದನಂತರ ಪಾವತಿ ಮಾಡಬೇಕಿದೆ. ಅದರಂತೆ ನಮ್ಮ ತಂಡಗಳೊಂದಿಗೆ ಉತ್ತಮ ಸಂಪರ್ಕದಲ್ಲಿರಲು ಮತ್ತು ಸುಗಮ ಸೇವೆಯನ್ನು ಪಡೆದುಕೊಳ್ಳಲು ನಮ್ಮ ಬಳಕೆದಾರರನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ಮುಂಬರುವ ವರ್ಷಗಳಲ್ಲಿ ಗ್ರಾಹಕರ ದೊಡ್ಡ ನೆಟ್‌ವರ್ಕ್‌ಗೆ ನಮ್ಮ ಸೇವೆಗಳನ್ನು ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಸೇವೆ ವ್ಯಾಪ್ತಿ ಎಷ್ಟು?: ಶಿಯೋಮಿಯ ಈ ಹೊಸ ಸೇವೆ ಮತ್ತು ಪ್ರಯೋಜನವು ಅವರ ಹತ್ತಿರದ ಸೇವಾ ಕೇಂದ್ರದಿಂದ 20 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ಲಭ್ಯವಿರಲಿದೆ. ಅದರಲ್ಲೂ ಹಿರಿಯ ನಾಗರಿಕರು ಪರಿಚಯಾತ್ಮಕವಾಗಿ ಈಗ ಉಚಿತವಾಗಿ ಸೇವೆ ಪಡೆದುಕೊಳ್ಳಬಹುದಾಗಿದೆ. ಇದರ ಅವಧಿ 30 ದಿನಗಳಾಗಿದೆ. ಆದರೆ, ಇತರೆ ಗ್ರಾಹಕರು ಸಹ ಈ ಸೇವೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದ್ದು, ಅವರು 249ರೂ. ಗಳನ್ನು ಪಾವತಿ ಮಾಡಬೇಕಾಗುತ್ತದೆ. ಇದರಲ್ಲಿ ತೆರಿಗೆ ಪಾವತಿ ಬೇರೆ ಇರುತ್ತದೆ.

ಎಲ್ಲೆಲ್ಲಿ ಈ ಸೇವೆ ಲಭ್ಯ?: ಮೊದಲ ಹಂತದಲ್ಲಿ ಈ ಸೇವೆಯು ಅಹಮದಾಬಾದ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ದೆಹಲಿ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನೋಯ್ಡಾ, ಪುಣೆ ಸೇರಿದಂತೆ 15 ನಗರಗಳಲ್ಲಿ ಲಭ್ಯವಿದೆ. ಈ 15 ನಗರದಲ್ಲಿನ ಜನರು ಅಥವಾ ಹಿರಿಯ ನಾಗರೀಕರು ಯಾವುದೇ ತೊಂದರೆಯನ್ನು ಅನುಭವಿಸಿದೆ ಸುಲಭವಾಗಿ ಈ ಸೇವೆ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








