Xiaomi: ಶಿಯೋಮಿ ಫೋನೇ ಆ ಲೆವೆಲ್.. ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರು ಇನ್ನೂ ಭರ್ಜರಿ ರೀ: ಯಾವಾಗ ಲಭ್ಯ?
ಶಿಯೋಮಿ (Xiaomi) ಅಂದಾಕ್ಷಣ ನೆನಪಿಗೆ ಬರುವುದು ಸುಧಾರಿತ ಫೀಚರ್ಸ್ ಆಯ್ಕೆ ಇರುವ ಫೋನ್‌ಗಳು. ಈ ಫೋನ್‌ಗಳು ಕಡಿಮೆ ದರದಲ್ಲಿ ಅತ್ಯುತ್ತಮ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ವಿಶೇಷವಾದ ಗ್ರಾಹಕರನ್ನು ಪಡೆದುಕೊಂಡಿದೆ. ಆದರೆ, ಈಗ ವಾಹನಗಳ ವಿಭಾಗದಲ್ಲಿ ಹೊಸ ಸಾಹಸಕ್ಕೆ ಕೈ ಹಾಕಿದೆ.
ಹೌದು, ಶಿಯೋಮಿಯ ವಾಹನಗಳು ಅದರಲ್ಲೂ ಅತ್ಯಾಕರ್ಷಕವಾಗಿರುವ ಕಾರುಗಳು ರಸ್ತೆಗಿಳಿಯಲಿವೆ. ಈ ಮೂಲಕ ಈವರೆಗೂ ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದ್ದ ಈ ಕಂಪೆನಿ ಇನ್ಮುಂದೆ ಭಿನ್ನ ವಿಭಿನ್ನ ಕಾರುಗಳನ್ನು ಪರಿಚಯಿಸಲಿದೆ. ಹಾಗಿದ್ರೆ, ಶಿಯೋಮಿಯ ಈ ಹೊಸ ಕಾರುಗಳು ಯಾವಾಗ ಲಭ್ಯ ಆಗಲಿವೆ?, ಮೈಲೆಜ್ ಎಷ್ಟು ಸಿಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಶಿಯೋಮಿ ಕಾರುಗಳು: ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ ಎಲೆಕ್ಟ್ರಿಕ್ ವಾಹನವನ್ನು ತಯಾರಿಸುತ್ತಿದೆ ಎಂಬ ಮಾಹಿತಿಯನ್ನು ಈವರೆಗೂ ಕೇಳುತ್ತಿದ್ದೆವು. ಆದರೆ, ಆ ಕಾರುಗಳು ಇಂದು ರಸ್ತೆಗಿಳಿಯುವ ಸಮಯ ಕೊನೆಗೂ ಬಂದಿದೆ. ಶಿಯೋಮಿ ಎಲೆಕ್ಟ್ರಿಕ್ ಕಾರು (Xiaomi Electric Vehicle) ಮುಂದಿನ ವರ್ಷ ರಸ್ತೆಗಿಳಿಯಲಿದೆ ಎನ್ನಲಾಗಿದೆ. ಇನ್ನು ಶಿಯೋಮಿ ಮಾರ್ಚ್ 2021 ರಲ್ಲಿ ಎಲೆಕ್ಟ್ರಿಕ್ ವಾಹನವನ್ನು ಉತ್ಪಾದಿಸುವುದಾಗಿ ಮಾಹಿತಿ ನೀಡಿತ್ತು.
ಶಿಯೋಮಿ ಲಾಂಚ್ ಮಾಡಲಿರುವ ಕಾರಿನ ಬಗ್ಗೆ ಕೆಲವು ಮಾಹಿತಿಗಳು ಈಗಾಗಲೇ ಲೀಕ್ ಆಗಿವೆ. ಅದರಂತೆ ಈ ಕಾರಿನ ಚಿತ್ರ ಅನಾವರಣಗೊಂಡಿದೆ. ಈ ಚಿತ್ರವನ್ನು ಎಕ್ಸ್ ಮೂಲಕ ಶೇರ್ ಮಾಡಿಕೊಳ್ಳಲಾಗಿದೆ. ಇನ್ನು ಈ ವಿಶೇಷ ಕಾರಿಗೆ ಪ್ರೀಮಿಯಂ ಕಾರು ತಯಾರಕರಾದ ಟೆಸ್ಲಾ ಮತ್ತು ಪೋರ್ಷೆಗಳ ಕಾರುಗಳ ನೋಟವನ್ನೇ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಅದರಲ್ಲೂ ಮುಂದಿನ ವರ್ಷ ಎಸ್‌ಯು ಸರಣಿಯಲ್ಲಿ ಮೂರು ಕಾರುಗಳನ್ನು ಬಿಡುಗಡೆ ಮಾಡಲು ಶಿಯೋಮಿ ನಿರ್ಧರಿಸಿದೆ. ಕಾರುಗಳಿಗೆ SU7, SU7 ಪ್ರೊ ಮತ್ತು SU7 ಮ್ಯಾಕ್ಸ್ ಎಂದು ಹೆಸರಿಸಲಾಗಿದೆ. ಇದರಲ್ಲಿ SU7 ಎಂಬ ಕಾರಿನ ಚಿತ್ರವನ್ನೇ ಈಗ ಅನಾವರಣ ಮಾಡಿರುವುದು. ಈ ಚಿತ್ರಗಳನ್ನು ಚೀನಾ ಸರ್ಕಾರದ ನಿಯಂತ್ರಣ ಸಂಸ್ಥೆ ಬಿಡುಗಡೆ ಮಾಡಿದೆ. ಈ ಚಿತ್ರಗಳನ್ನು ನೋಡಿ ಕಾರು ಪ್ರಿಯರು ಈ ಕಾರ್ ಖರೀದಿ ಮಾಡಲು ಕಾತುರದಿಂದ ಕಾದು ಕುಳಿತುಕೊಳ್ಳುವಂತೆ ಆಗಿದೆ.

ಸೋರಿಕೆಯಾದ ಚಿತ್ರವನ್ನು ಗಮನಿಸಿದ್ರೆ ಈ ಕಾರು 5 ಆಸನಗಳ ಸಾಮರ್ಥ್ಯ ಹೊಂದಿದೆ ಎಂದು ತಿಳಿಯುತ್ತದೆ. ಕಂಪನಿಯು ಕಾರಿಗೆ ಮೆಟಾಲಿಕ್ ಬಾಡಿ ಆಯ್ಕೆ ನೀಡಿದೆ ಎನ್ನಲಾಗಿದೆಯಾದರೂ ಸಹ ಶಿಯೋಮಿ ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಸದ್ಯದಲ್ಲೇ ತಾಂತ್ರಿಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಅದಾಗ್ಯೂ ಈಗ ಅನಾವರಣ ಆಗಿರುವ ಚಿತ್ರಕ್ಕೆ ಎಕ್ಸ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನು ಲಭ್ಯವಿರುವ ವರದಿಗಳ ಪ್ರಕಾರ ಶಿಯೋಮಿ ಈ ವರ್ಷದ ಡಿಸೆಂಬರ್‌ನಲ್ಲಿ ಈ ಕಾರುಗಳ ಉತ್ಪಾದನೆಯನ್ನು ಪ್ರಾರಂಭಿಸುತ್ತದೆ ಎನ್ನಲಾಗಿದೆ. ಇದಾದ ನಂತರ ಮುಂದಿನ ವರ್ಷ ಫೆಬ್ರವರಿಯಿಂದ ಗ್ರಾಹಕರು ಕಾರುಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತಾರೆ ಎಂದು ಲೀಕ್ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಈ ಕಾರುಗಳು ಮೊದಲು ಚೀನಾಕ್ಕೆ ಆಗಮಿಸುತ್ತವೆ, ನಂತರ ಇತರ ದೇಶಗಳಿಗೆ ಎಂಟ್ರಿ ಕೊಡಲಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ, ಶಿಯೋಮಿ ಚೀನಾದಲ್ಲಿ ಇ-ಕಾರುಗಳನ್ನು ಮಾರಾಟ ಮಾಡುವ ಉದ್ದೇಶಕ್ಕೆ ಪರವಾನಗಿಗಾಗಿ ಅರ್ಜಿ ಸಲ್ಲಿಕೆ ಮಾಡಿದೆ ಎನ್ನಲಾಗಿದ್ದು, ಈ ಕಾರ್‌ನಲ್ಲಿ ಹೈಪರ್ ಓಎಸ್ ತಂತ್ರಜ್ಞಾನವು ಇರಲಿದ್ದು, ಈ ತಂತ್ರಜ್ಞಾನವು ಇತರ ಶಿಯೋಮಿ ಡಿವೈಸ್‌ಗಳನ್ನು ಕಾರಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದಷ್ಟೇ ಶಿಯೋಮಿ ಮಾಹಿತಿ ನೀಡಿದೆ. ಇದರೊಂದಿಗೆ ಈ ಕಾರುಗಳ ಗರಿಷ್ಠ ವೇಗ 210 kmph ಎಂದು ಹೇಳಲಾಗಿದ್ದು, ಈ ಸರಣಿಯ ಟಾಪ್ ಎಂಡ್ ಕಾರು ಗಂಟೆಗೆ 265 ಕಿಮೀ ವೇಗ ಹೊಂದಿರಲಿದೆ ಎನ್ನಲಾಗಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಇಷ್ಟೊಂದು ಸುಂದರವಾಗಿ ಕಾಣುವ ಕಾರಿನ ದರ ಎಷ್ಟು ಎಂದು ಎಲ್ಲಾ ಕಡೆ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಶಿಯೋಮಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಅದಾಗ್ಯೂ ಟೆಸ್ಲಾ ಮತ್ತು ಪೋರ್ಷೆ ಮುಂತಾದ ಪ್ರೀಮಿಯಂ ವಾಹನ ತಯಾರಕರ ಕಾರುಗಳಿಗೆ ಹೋಲಿಸಿದರೆ ಶಿಯೋಮಿ ಕಾರುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಬಹುದು ಎಂಬ ನಿರೀಕ್ಷ ಇದೆ.


Click it and Unblock the Notifications








