Twitter ಖಾತೆ ಇಲ್ಲವೇ? ಹಾಗಿದ್ರೆ ಇನ್ಮುಂದೆ ನೆಚ್ಚಿನ ಸೆಲೆಬ್ರಿಟಿಗಳ ಟ್ವೀಟ್ ವೀಕ್ಷಣೆ ಅಸಾಧ್ಯ!
ಟ್ವಿಟ್ಟರ್ (Twitter) ಪಂಚದಾದ್ಯಂತ ಜರುಗುವ ಆಗು-ಹೋಗುಗಳ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಎಲಾನ್ ಮಸ್ಕ್ ಅವರು ಇದನ್ನು ಖರೀದಿ ಮಾಡಿದ ನಂತರ ಕೆಲವು ಬದಲಾವಣೆಗಳನ್ನು ಮಾಡಿ ಬಳಕೆದಾರಿಗೆ ಭಿನ್ನ ಅನುಭವ ಲಭ್ಯ ಆಗುವಂತೆ ಮಾಡುತ್ತಿದ್ದಾರೆ. ಈ ನಡುವೆ ಜನರಿಗೆ ಶಾಕ್‌ವೊಂದನ್ನು ಸಹ ನೀಡಲಾಗಿದ್ದು, ನೆಚ್ಚಿನ ಖಾತೆಗಳನ್ನು ವೀಕ್ಷಣೆ ಮಾಡುವುದನ್ನು ತಡೆಹಿಡಿಲಾಗುತ್ತದೆ.
ಹೌದು, ನೀವು ಈವರೆಗೂ ಟ್ವಿಟ್ಟರ್ ಖಾತೆ ಹೊಂದಿಲ್ಲದಿದ್ದರೂ ಸಹ ಅದನ್ನು ಬಳಕೆ ಮಾಡಲು ಅನುವು ಮಾಡಿಕೊಡಲಾಗಿತ್ತು. ಆದರೆ, ಈಗ ಈ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಬದಲಾವಣೆ ಮಾಡಲಾಗುತ್ತಿದ್ದು, ಟ್ವಿಟ್ಟರ್ ಖಾತೆ ಇಲ್ಲದ ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಸೇವೆ ಪಡೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ಹಾಗಿದ್ರೆ, ಟ್ವಿಟ್ಟರ್ ಯಾಕೆ ಈ ನಿರ್ಧಾರ ಮಾಡಿದೆ?, ಮಸ್ಕ್‌ರ ಮುಂದಿನ ನಡೆ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಎಲ್ಲರೂ ಖಾತೆ ಹೊಂದಿರಬೇಕು: ಹೊಸ ಚಂದಾದಾರರನ್ನು ಪಡೆಯುವ ಹತಾಶ ಪ್ರಯತ್ನದಲ್ಲಿ ಎಲಾನ್ ಮಸ್ಕ್ ಟ್ವಿಟರ್ ಖಾತೆ ಹೊಂದಿರದ ಬಳಕೆದಾರರಿಗೆ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಅಂದರೆ ನೀವು ಟ್ವಿಟ್ಟರ್‌ನಲ್ಲಿ ಖಾತೆ ಹೊಂದಿಲ್ಲದಿದ್ದರೆ ಇನ್ನು ಮುಂದೆ ಟ್ವೀಟ್‌ಗಳನ್ನು ವೀಕ್ಷಿಸಲಾಗುವುದಿಲ್ಲ. ಹಾಗೆಯೇ ಇದು ತಾತ್ಕಾಲಿಕ ತುರ್ತು ಕ್ರಮವಾಗಿದೆ ಎಂದು ಹೇಳಿದ್ದಾರೆ. ನಮ್ಮ ಡೇಟಾವನ್ನು ತುಂಬಾ ಲೂಟಿ ಮಾಡಲಾಗುತ್ತಿದೆ, ಇದು ಸಾಮಾನ್ಯ ಬಳಕೆದಾರರಿಗೆ ಅತಿರೇಕದ ಸೇವೆಯಾದಂತೆ ಆಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಟ್ವಿಟರ್ ಖಾತೆಯನ್ನು ಹೊಂದಿರುವ ಅಥವಾ ಹೊಂದಿರದೆ ಇರುವ ಯಾರೇ ಆದರೂ ಸಹ ಟ್ವಿಟ್ಟರ್ ಬಳಕೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಅಂದರೆ ಟ್ವೀಟ್‌ಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಹೊಸ ನಿಯಮವು ಬಳಕೆದಾರರಿಗೆ ಟ್ವಿಟ್ಟರ್ ಸೇವೆ ಪಡೆಯಲು ಅವಕಾಶ ನೀಡುವುದಿಲ್ಲ. ಥರ್ಡ್ ಪಾರ್ಟಿ ಡೇಟಾವನ್ನು ಸ್ಕ್ರ್ಯಾಪ್ ಮಾಡುವ ಸಮಸ್ಯೆಯನ್ನು ಪರಿಹರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಹೇಳಲಾಗಿದೆ.
ಮಿತಿಮೀರಿದ ಡೇಟಾ ಸ್ಕ್ರ್ಯಾಪಿಂಗ್ ಸಾಮಾನ್ಯ ಬಳಕೆದಾರರ ಸೇವೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಸ್ಕ್ ವಿವರಿಸಿದ್ದಾರೆ. ಇನ್ನು ಅನುಮತಿಯಿಲ್ಲದೆ ಟ್ವಿಟರ್‌ನ ಡೇಟಾವನ್ನು ಬಳಕೆ ಮಾಡುತ್ತಿರುವ ಕಂಪನಿಗಳನ್ನು ಮಸ್ಕ್ ಈ ಹಿಂದೆ ಟೀಕೆ ಮಾಡಿದ್ದರು. ಟ್ವಿಟರ್ ಡೇಟಾವನ್ನು ಬಳಸಿಕೊಂಡು ಮೈಕ್ರೋಸಾಫ್ಟ್ ತನ್ನ ಕೃತಕ ಬುದ್ಧಿಮತ್ತೆಯನ್ನು ಕಾನೂನು ಬಾಹಿರವಾಗಿ ತರಬೇತಿ ನೀಡುತ್ತಿದೆ ಎಂದೂ ಸಹ ಅವರು ಆರೋಪಿಸಿದ್ದರು.
ಇಷ್ಟು ಮಾತ್ರವಲ್ಲದೆ ಸ್ಟಾರ್ಟ್-ಅಪ್ ಆದ ಓಪನ್ಎಐ ಅದೇ ರೀತಿ ಮಾಡುತ್ತಿದೆ ಎಂದೂ ಸಹ ಕಳವಳ ವ್ಯಕ್ತಪಡಿಸಿದರು. ಈ ಎಲ್ಲಾ ಬೆಳವಣಿಗೆಗಳಿಂದ ಮಸ್ಕ್ ಈ ನಿರ್ಧಾರ ಮಾಡಿದ್ದಾರಾದರೂ ಸಹ ತಾತ್ಕಾಲಿಕವಾಗಿ ಹೆಚ್ಚಿನ ಜನರು ಇಲ್ಲಿ ಖಾತೆ ತೆರೆಯಬಹುದು. ಅದಾಗ್ಯೂ ಇದು ಶಾಶ್ವತ ಬದಲಾವಣೆಯಾದರೆ ಟ್ವಿಟ್ಟರ್ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎನ್ನಲಾಗಿದೆ.

ವ್ಯಾಪಕ ಆಕ್ರೋಶ: ಮಸ್ಕ್‌ರ ಈ ದಿಢೀರ್ ನಿರ್ಧಾರಗಳು ಯಾವಾಗಲೂ ಸಹ ಟೀಕೆಗೆ ಗುರಿಯಾಗುತ್ತಲೇ ಇರುತ್ತವೆ. ಅದೇ ರೀತಿ ಈ ನಿಯಮದ ವಿರುದ್ಧವೂ ಸಹ ಆನ್‌ಲೈನ್‌ನಲ್ಲಿ ವ್ಯಾಪಕ ದೂರುಗಳು ಬಂದಿವೆ. ಈ ಮೂಲಕ ಮಸ್ಕ್ ಈ ನಿರ್ಧಾರವನ್ನು ತ್ವರಿತವಾಗಿ ಹಿಂತೆಗೆದುಕೊಳ್ಳಲೂಬಹುದು ಎನ್ನಲಾಗಿದೆ. ಇನ್ನು ಸಾರ್ವಜನಿಕ ಒತ್ತಡದಿಂದಾಗಿ ಅವರು ಹಿಂದೆ ಸರಿಯುವುದು ಇದೇ ಮೊದಲೇನಲ್ಲ ಬದಲಾಗಿ ಹಿಂದಿನ ವರ್ಷದ ಡಿಸೆಂಬರ್‌ನಲ್ಲಿ ಕೆಲವು ಸಾಮಾಜಿಕ ಮಾಧ್ಯಮ ಸೈಟ್‌ಗಳಿಗೆ ಲಿಂಕ್‌ಗಳನ್ನು ನಿಷೇಧಿಸುವ ನಿಯಮವನ್ನು ಮಸ್ಕ್ ಜಾರಿಗೆ ತಂದಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆ ವಾಪಸ್ ಪಡೆದುಕೊಂಡಿದ್ದರು.


Click it and Unblock the Notifications








