ಭಾರತದ ಮೊದಲ ಫೋಲ್ಡಬಲ್ ಲ್ಯಾಪ್‌ಟಾಪ್ ಬಗ್ಗೆ ತಿಳಿದುಕೊಂಡ್ರೆ ವಾವ್ ಅಂತೀರ.!
ತಂತ್ರಜ್ಞಾನ ಅಭಿವೃದ್ಧಿಯಾದಂತೆ ವಿವಿಧ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ಟಿವಿಗಳು ಹಾಗೂ ಇನ್ನಿತರೆ ಗ್ಯಾಜೆಟ್‌ಗಳು ನಮ್ಮ ಕೈ ಸೇರಿವೆ. ಇದರ ಭಾಗವಾಗಿಯೇ ಸದ್ಯಕ್ಕೆ ಭಾರತದ ಮೊದಲ ಫೋಲ್ಡಬಲ್ ಲ್ಯಾಪ್‌ಟಾಪ್ ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಈ ಲ್ಯಾಪ್‌ಟಾಪ್‌ನ ನೋಟ ಬಳಕೆದಾರರಿಗೆ ಹೊಸ ಅನುಭವ ನೀಡಲಿದ್ದು, ಈ ಫೋಲ್ಡಬಲ್ ಲ್ಯಾಪ್‌ಟಾಪ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ನೀಡಿದ್ದೇವೆ.

ಹೌದು, ಈಗಂತೂ ಫೋಲ್ಡಬಲ್ ಗ್ಯಾಜೆಟ್‌ಗಳ ಕಾಲ. ಅದರಂತೆ ಆಸುಸ್‌ನ 'ಝೆನ್‌ಬುಕ್ ಫೋಲ್ಡ್' ಭಾರತದಲ್ಲಿ ಮಾರಾಟಕ್ಕಿರುವ ಮೊದಲ ಫೋಲ್ಡಬಲ್ ಲ್ಯಾಪ್‌ಟಾಪ್ ಆಗಿದೆ. ಹಾಗಿದ್ರೆ, ಸಾಮಾನ್ಯ ಲ್ಯಾಪ್‌ಟಾಪ್‌ಗೂ ಈ ಲ್ಯಾಪ್‌ಟಾಪ್‌ಗೂ ಇರುವ ವ್ಯಾತ್ಯಾಸ ಏನು? ಈ ಹೊಸ ರೀತಿಯ ಲ್ಯಾಪ್‌ಟಾಪ್ ಬಳಕೆಗೆ ಎಷ್ಟು ಯೋಗ್ಯ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ವಿಭಿನ್ನ ಶೈಲಿ ಹಾಗೂ ಆಕರ್ಷಕ ನೋಟ
ಆಸುಸ್ ಝೆನ್‌ಬುಕ್ ಫೋಲ್ಡ್ ಸಾಮಾನ್ಯ ಲ್ಯಾಪ್‌ಟಾಪ್‌ಗಿಂತ ಭಿನ್ನವಾದ ನೋಟವನ್ನು ಹೊಂದಿದೆ. ಸದ್ಯಕ್ಕೆ ಬೇರೆ ಕಂಪೆನಿಗಳು ಈ ರೀತಿಯ ಲ್ಯಾಪ್‌ಟಾಪ್ ಅನ್ನು ತಯಾರು ಮಾಡಲು ಮುಂದಾಗಿಲ್ಲ. ಅದಾಗ್ಯೂ ಈ ಲ್ಯಾಪ್‌ಟಾಪ್ ಆಸುಸ್‌ಗೆ ಒಂದು ಮಹತ್ವದ ಹೆಜ್ಜೆಯಾಗಿರಲಿದೆ. ಇನ್ನು ಇದರ ಶೈಲಿಯ ಬಗ್ಗೆ ಹೇಳುವುದಾದರೆ ಮಡಿಸಬಹುದಾದ ಡಿಸ್‌ಪ್ಲೇ ಆಯ್ಕೆ ಹೆಚ್ಚಿನ ಆಕರ್ಷಣೆ ಪಡೆದಿದ್ದು, ಹೆಚ್ಚಿನ ಪ್ರೀಮಿಯಂ ನೋಟಕ್ಕಾಗಿ ಪ್ಯಾನಲ್‌ನ ಮಧ್ಯಭಾಗದಲ್ಲಿ ಚರ್ಮದ ಹೊದಿಕೆಯ ಮೆಟಿರಿಯಲ್ ಬಳಕೆ ಮಾಡಲಾಗಿದೆ.

ವಿಶಿಷ್ಟ ಹಿಂಜ್ ಯಾಂತ್ರಿಕತೆ
ಸಾಮಾನ್ಯವಾದ ಲ್ಯಾಪ್‌ಟಾಪ್‌ನಲ್ಲೇ ಈ ಹಿಂಜ್ ಕಾರ್ಯವಿಧಾನವು ಸ್ವಲ್ಪ ಹೆಚ್ಚು ಕಡಿಮೆಯಾದರೆ ಕಷ್ಟ. ಅಂತಹುದರಲ್ಲಿ ಈ ಫೋಲ್ಡಬಲ್ ಲ್ಯಾಪ್‌ಟಾಪ್‌ನಲ್ಲಿ ಹೇಗಿರಲಿದೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ಈ ಕಾರಣಕ್ಕೆ ಆಸುಸ್ ವಿಶಿಷ್ಟವಾದ ಡ್ಯುಯಲ್ ಹಿಂಜ್ ವಿನ್ಯಾಸ ಕಾರ್ಯವಿಧಾನವನ್ನು ಬಳಕೆ ಮಾಡಿದೆ. ಹಾಗೆಯೇ ಲ್ಯಾಪ್‌ಟಾಪ್ ತೆರೆಯುವ ಹಾಗೂ ಮುಚ್ಚುವ ಪ್ರಕ್ರಿಯೆ ನಿಮಗೆ ವಿಶೇಷ ಅನುಭವ ನೀಡಲಿದೆ.

ಬಹು ಬಳಕೆಯ ಸಂದರ್ಭಗಳಿಗೆ ಸರಿಹೊಂದುವಂತೆ ನಿರ್ಮಾಣ
ಈ ಡಿವೈಸ್ ಬಹು ಬಳಕೆಗೆ ಯೋಗ್ಯವಾಗುವಂತೆ ನಿರ್ಮಾಣ ಮಾಡಲಾಗಿದೆ. ಉದಾಹರಣೆಗೆ ಇದು ಕಾಂಪ್ಯಾಕ್ಟ್ ಲ್ಯಾಪ್‌ಟಾಪ್ ಆಗಿದ್ದು, ಅರ್ಧದಷ್ಟು ಮಡಿಸಿದಾಗ, ಇದು ದೊಡ್ಡ ಪರದೆಯ ಟ್ಯಾಬ್ಲೆಟ್ ಆಗಲಿದೆ. ಜೊತೆಗೆ ರೀಡರ್ ಮತ್ತು ಆಲ್ ಇನ್ ಒನ್ ಸಾಧನವನ್ನಾಗಿಯೂ ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ ಇದರಲ್ಲಿ ಇನ್‌ಬಿಲ್ಟ್ ಕಿಕ್‌ಸ್ಟ್ಯಾಂಡ್ ಆಯ್ಕೆ ನೀಡಲಾಗಿದೆ.

ವಿಭಿನ್ನ ಬಟನ್ ಮತ್ತು ಪೋರ್ಟ್‌ಗಳು
ಪ್ರಮುಖವಾಗಿ ಈ ಲ್ಯಾಪ್‌ಟಾಪ್ ವಿಚಾರದಲ್ಲಿ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿರುವುದರಿಂದ ಪೋರ್ಟ್‌ಗಳು ಮತ್ತು ಪವರ್ ಬಟನ್‌ಗಳ ಆಯ್ಕೆಯ ವಿಚಾರದಲ್ಲಿ ಆಸುಸ್ ಬೇರೆಯದೇ ರೀತಿಯಲ್ಲಿ ಯೋಚಿಸಿದೆ. ಯಾಕೆಂದರೆ ಝೆನ್‌ಬುಕ್ ಫೋಲ್ಡ್ ಎರಡು ಟೈಪ್-ಸಿ ಥಂಡರ್‌ಬೋಲ್ಟ್ 4 ಪೋರ್ಟ್‌ಗಳನ್ನು ಹೊಂದಿದೆ. ಹಾಗೆಯೇ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಸಹ ವಿಶಿಷ್ಟವಾಗಿವೆ.

ಕ್ರಿಯಾತ್ಮಕ ಕೀಬೋರ್ಡ್
ಲ್ಯಾಪ್‌ಟಾಪ್ ಅನ್ನು ಮಡಿಸಿದಾಗ ಅದರೊಳಗೆ ಭೌತಿಕ ಕೀಬೋರ್ಡ್ ಹೊಂದಿಕೊಳ್ಳುತ್ತದೆ. ಜೊತೆಗೆ ಈ ಕೀಬೋರ್ಡ್‌ನ ಟೈಪಿಂಗ್ ಮತ್ತು ಟ್ರ್ಯಾಕ್‌ಪ್ಯಾಡ್ ಅನುಭವವು ಉತ್ತಮವಾಗಿದೆ. ಇದು ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸಲಿದ್ದು, ಒಂದೇ ಸಮಯದಲ್ಲಿ ಎರಡು ಡಿವೈಸ್‌ಗಳಿಗೆ ಕನೆಕ್ಟ್ ಮಾಡಿಕೊಳ್ಳಬಹುದು. ಇದರಲ್ಲಿ ಸದ್ಯಕ್ಕೆ ಕಂಡುಬಂದಿರುವ ಸಮಸ್ಯೆ ಎಂದರೆ ಬ್ಯಾಟರಿ ಬಾಳಿಕೆ. ಇದು ಕೇವಲ 15 ಗಂಟೆಗಳವರೆಗೆ ಬ್ಯಾಕ್‌ಅಪ್ ನೀಡಲಿದ್ದು, ಟೈಪ್-ಸಿ ಚಾರ್ಜಿಂಗ್ ಕೇಬಲ್ ಬಳಸಿ ಚಾರ್ಜ್ ಮಾಡಿಕೊಳ್ಳಬಹುದು.

ಒಂದೇ ಡಿಸ್‌ಪ್ಲೇ ಎರಡು ಗಾತ್ರ
ಝೆನ್‌ಬುಕ್ ಫೋಲ್ಡ್ BOE ನಿಂದ ಮಾಡಿದ ದೊಡ್ಡ 17.3 ಇಂಚಿನ ಫೋಲ್ಟಬಲ್ ಡಿಸ್‌ಪ್ಲೇ ಹೊಂದಿದ್ದು, ಇದನ್ನು 12.5 ಇಂಚಿನ FHD ಲ್ಯಾಪ್‌ಟಾಪ್‌ನಂತೆ ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ ಕೆಳಗಿನ ಪರದೆಯಡಿಯಲ್ಲಿ ಕೀಬೋರ್ಡ್‌ನೊಂದಿಗೆ ಫೋಲ್ಡ್ ಮಾಡಬಹುದು. ಇದು 500 ನಿಟ್‌ಗಳ ಬ್ರೈಟ್‌ನೆಸ್ ನೀಡಲಿದ್ದು, 100% DCI PC ಬಣ್ಣದ ಹರವು ಇರಲಿದೆ.

ವಿಂಡೋಸ್ 11 ಸಪೋರ್ಟ್ ಮಾಡುವುದಿಲ್ಲ
ವಿಂಡೋಸ್ 11 ಮಡಿಸಬಹುದಾದ ಡಿಸ್‌ಪ್ಲೇಯನ್ನು ಬೆಂಬಲಿಸುವುದಿಲ್ಲ. ಆದರೆ, ಇದಕ್ಕೆ ಪರಿಹಾರ ಮಾರ್ಗ ಕಂಡುಕೊಂಡಿರುವ ಆಸುಸ್ ವಿಂಡೋಸ್ 11 ಬಳಕೆ ಮಾಡುವ ಉದ್ದೇಶದಿಂದ ಮೈಆಸುಸ್, ಸ್ಕ್ರೀನ್ ಎಕ್ಸ್‌ಪರ್ಟ್ ಸೇರಿದಂತೆ ಇನ್ನಿತರೆ ಸಾಫ್ಟ್‌ವೇರ್‌ಗಳನ್ನು ಇದರಲ್ಲಿ ಇರಿಸಿದೆ.

ಉತ್ತಮ ಕಾರ್ಯಕ್ಷಮತೆ. ಆದರೆ, ಸಣ್ಣ ಸಮಸ್ಯೆ
ಈ ಲ್ಯಾಪ್‌ಟಾಪ್ 12ನೇ ತಲೆಮಾರಿನ ಇಂಟೆಲ್ ಕೋರ್ i7 1150U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 16GB RAM ಹಾಗೂ 1TB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 4.7GHz ಗರಿಷ್ಠ ಗಡಿಯಾರದ ವೇಗವನ್ನು ಇದು ಹೊಂದಿದ್ದು, ಕಾರ್ಯಕ್ಷಮತೆ ಉತ್ತಮವಾಗಿದೆಯಾದರೂ ಒಂದೆರಡು ಗಂಟೆಗಳ ನಿರಂತರ ಬಳಕೆಯ ನಂತರ ಲ್ಯಾಪ್‌ಟಾಪ್ ಸ್ವಲ್ಪ ನಿಧಾನವಾಗಲಿದೆಯಂತೆ.

ಉತ್ತಮ ಬ್ಯಾಟರಿ
ಈ ಡಿವೈಸ್ 75Whr ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದ್ದು, ಮಧ್ಯಮ ಲೋಡ್‌ನಲ್ಲಿ ಸುಮಾರು 5 ರಿಂದ 6 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ. ಈ ಸಾಧನದ ಕಾರ್ಯಕ್ಷಮತೆಗೆ ತಕ್ಕಂತೆ ಬ್ಯಾಟರಿ ಸಾಮರ್ಥ್ಯ ನೀಡಿರುವುದು ವಿಶೇಷ.


Click it and Unblock the Notifications








