YouTube: ನೀವು ಆ ರೀತಿ ಮಾಡಿದ್ರೂ ಸಹ ಯೂಟ್ಯೂಬ್‌ನಲ್ಲಿ ಜಾಹೀರಾತು ಪ್ರಸಾರವಾಗಲಿವೆ...
ಯೂಟ್ಯೂಬ್ (YouTube) ಅಂದರೆ ಎಲ್ಲರಿಗೂ ಇಷ್ಟ ಆದರೆ ಅದರಲ್ಲಿ ಬರುವ ಜಾಹೀರಾತುಗಳೆಂದರೆ ಕಷ್ಟ ಕಷ್ಟ. ಈ ಕಾರಣಕ್ಕೆ ಸಾಕಷ್ಟು ಜನರು ಪ್ರೀಮಿಯಂ ಚಂದಾದಾರಿಕೆ ಪಡೆದರೆ ಇನ್ನೂ ಹಲವರು ವಿವಿಧ ಮಾರ್ಗಗಳ ಮೂಲಕ ಜಾಹೀರಾತನ್ನು ತಪ್ಪಿಸಲು ನೋಡುತ್ತಾರೆ. ಆದರೆ ಈಗ ಯೂಟ್ಯೂಬ್ ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಿದೆ.
ಹೌದು, ಜಾಹೀರಾತು (Advertisement) ಇಲ್ಲದೆ ಯಾವುದೇ ಈ ರೀತಿಯ ಪ್ಲಾಟ್‌ಫಾರ್ಮ್ ಅನ್ನು ನಡೆಸಲು ಕಷ್ಟ. ಈ ಕಾರಣಕ್ಕೆ ಯೂಟ್ಯೂಬ್‌ಗಳಲ್ಲಿ ಸಾಕಷ್ಟು ಜಾಹೀರಾತುಗಳನ್ನು ಪ್ಲೇ ಮಾಡಲಾಗುತ್ತದೆ. ಅದರಂತೆ ಬಳಕೆದಾರರು ಇಷ್ಟವಿಲ್ಲದಿದ್ದರೂ ಅನಿರೀಕ್ಷಿತವಾಗಿ ಜಾಹೀರಾತುಗಳನ್ನು ನೋಡಬೇಕಾಗುತ್ತದೆ. ಹಾಗಿದ್ರೆ, ಏನಿದು ಯೂಟ್ಯೂಬ್‌ನ ಹೊಸ ಪ್ರಯೋಗ, ಯಾಕೆ ಈ ರೀತಿ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ವಿಡಿಯೋ ವಿರಾಮಗೊಳಿಸಿದರೂ ಜಾಹೀರಾತು ಪ್ರಸಾರ: ನೀವು ವಿಡಿಯೋಗಳನ್ನು ವಿರಾಮಗೊಳಿಸಿದರೂ ಸಹ ಯೂಟ್ಯೂಬ್‌ನ ಮೂಲ ಕಂಪನಿಯಾದ ಗೂಗಲ್ ತನ್ನ ಇತ್ತೀಚಿನ ಗಳಿಕೆಯ ಭಾಗವಾಗಿ ಜಾಹೀರಾತು ಪ್ರಸಾರ ಮಾಡಲಿದೆ. ಈ ವಿರಾಮ ಜಾಹೀರಾತುಗಳ (Pause Ads) ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳಿಂದ ಸಂತಸಗೊಂಡಿದೆ ಎಂದು ತಿಳಿದುಬಂದಿದೆ. ಇದು ವ್ಯಾಪಕವಾದ ರೋಲ್‌ಔಟ್‌ಗೆ ಸನ್ನಿಹಿತವಾಗಬಹುದು ಎಂದು ಕೆಲವು ಮಾಹಿತಿಗಳಿವೆ.
ವಿರಾಮ ಜಾಹೀರಾತುಗಳು ಎಂದರೆ ಏನು?: ನೀವು ವೀಕ್ಷಣೆ ಮಾಡುತ್ತಿರುವ ವಿಡಿಯೋವನ್ನು ವಿರಾಮಗೊಳಿಸಿದಾಗ ಕಾಣಿಸಿಕೊಳ್ಳುವ ಬಿಟ್ಟುಬಿಡಲಾಗದ ಜಾಹೀರಾತುಗಳಾಗಿವೆ. ಆರಂಭದಲ್ಲಿ ಸ್ಮಾರ್ಟ್ ಟಿವಿಗಳಲ್ಲಿ ಇದನ್ನು ಪರೀಕ್ಷಿಸಲಾಗಿತ್ತು. ಬಳಕೆದಾರರು ವಿರಾಮ ಬಟನ್ ಅನ್ನು ಒತ್ತಿದಾಗ ಈ ಜಾಹೀರಾತುಗಳು ಡಿಸ್‌ಪ್ಲೇ ಮೇಲೆ ತೆಗೆದುಕೊಳ್ಳುತ್ತದೆ. ತಾತ್ಕಾಲಿಕವಾಗಿ ವಿಡಿಯೋವನ್ನು ಕಡಿಮೆಗೊಳಿಸುತ್ತದೆ.

ಆಲ್ಫಾಬೆಟ್‌ನ ಮೊದಲ ತ್ರೈಮಾಸಿಕ ಗಳಿಕೆ ಸಮಯದಲ್ಲಿ ಈ ಜಾಹೀರಾತುಗಳು ಉತ್ತೇಜಕ ಫಲಿತಾಂಶಗಳನ್ನು ನೀಡಿವೆ. ಗಣನೀಯ ಬ್ರಾಂಡ್ ಅನ್ನು ಹೆಚ್ಚಿಸಿವೆ ಮತ್ತು ಜಾಹೀರಾತುದಾರರಿಂದ ಪ್ರೀಮಿಯಂ ದರಗಳನ್ನು ಆದೇಶಿಸಿವೆ ಎಂದು ಗೂಗಲ್‌ನ ಉಪಾಧ್ಯಕ್ಷರಾದ ಫಿಲಿಪ್ ಷಿಂಡ್ಲರ್ ಹೇಳಿದ್ದಾರೆ. ಆದಾಗ್ಯೂ, ಈ ವಿರಾಮ ಜಾಹೀರಾತುಗಳು ಎಲ್ಲಾ ರೀತಿಯ ಯೂಟ್ಯೂಬ್ ಪ್ರೇಕ್ಷಕರಿಗೆ ವಿಸ್ತರಿಸುತ್ತವೆಯೇ ಅಥವಾ ಈ ಫೋನ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಂತಹ ಸಣ್ಣ ಡಿಸ್‌ಪ್ಲೇಗೆ ಮಾತ್ರ ಸೀಮಿತವಾಗುತ್ತವೆಯೇ ಅನ್ನೋದನ್ನು ಮಾತ್ರ ಅವರು ತಿಳಿಸಿಲ್ಲ.
ಇನ್ನು ವಿರಾಮ ಜಾಹೀರಾತುಗಳ ರೋಲ್‌ಔಟ್‌ಗಾಗಿ ಗೂಗಲ್ ನಿರ್ದಿಷ್ಟ ಟೈಮ್‌ಲೈನ್ ಅನ್ನು ಒದಗಿಸಿಲ್ಲವಾದರೂ, ಆರಂಭಿಕ ಪರೀಕ್ಷೆಗಳ ಧನಾತ್ಮಕ ಫಲಿತಾಂಶಗಳು ಅವು ಪ್ಲಾಟ್‌ಫಾರ್ಮ್‌ನಲ್ಲಿ ನಿಯಮಿತ ಫೀಚರ್ಸ್ ಆಗಬಹುದು ಎಂದು ಸೂಚಿಸುತ್ತವೆ. ಈ ಕ್ರಮವು ಜಾಹೀರಾತು ಆದಾಯವನ್ನು ಹೆಚ್ಚಿಸಲು ಯೂಟ್ಯೂಬ್‌ನಲ್ಲಿ ನಡೆಯುತ್ತಿರುವ ಪ್ರಯತ್ನಗಳೊಂದಿಗೆ ಹೊಂದಿಕೆಯಾಗುತ್ತದೆ ಎನ್ನಲಾಗಿದೆ. ಇದು ಬಿಟ್ಟುಬಿಡಲಾಗದ 30 ಸೆಕೆಂಡ್ ಜಾಹೀರಾತುಗಳನ್ನು ಪ್ರದರ್ಶಿಸುವುದು ಮತ್ತು ಜಾಹೀರಾತು ಬ್ಲಾಕರ್‌ಗಳ ವಿರುದ್ಧ ಸೆಣಸುವುದೇ ಆಗಿದೆ.

ಯಾವುದೇ ಅಡೆತಡೆ ಇಲ್ಲದ ವೀಕ್ಷಣೆಯ ಅನುಭವಗಳಿಗೆ ಒಗ್ಗಿಕೊಂಡಿರುವ ಬಳಕೆದಾರರಿಗೆ ಈ ವಿರಾಮ ಜಾಹೀರಾತುಗಳ ಪರಿಚಯವು ಹತಾಶೆಯನ್ನು ಉಂಟು ಮಾಡಬಹುದು ಎನ್ನಲಾಗಿದೆ. ಆದಾಗ್ಯೂ, ಆದಾಯದ ಪ್ರಾಥಮಿಕ ಮೂಲವಾಗಿ ಜಾಹೀರಾತಿನ ಮೇಲೆ ಯೂಟ್ಯೂಬ್ ಇದನ್ನು ಅವಲಂಬನೆ ಮಾಡಿದರೂ ಸಹ ಆಶ್ಚರ್ಯವೇನಿಲ್ಲ. ಜಾಹೀರಾತು ನಿಯೋಜನೆಗಾಗಿ ಯೂಟ್ಯೂಬ್ ಹೊಸ ಮಾರ್ಗಗಳನ್ನು ಅನ್ವೇಷಿಸುವುದನ್ನು ಮುಂದುವರೆಸುತ್ತಿರುವುದರಿಂದ ಈ ರೀತಿಯ ಬೆಳವಣಿಗೆಗಳನ್ನು ಆಗಾಗ್ಗೆ ಬಳಕೆದಾರರು ಎದುರಿಸಲೇ ಬೇಕಾಗುತ್ತದೆ.
ಇನ್ನು ಈ ಜಾಹೀರಾತಿನ ಸಹವಾಸ ಸಾಕು ಎನ್ನುವವರು ವಿವಿಧ ರೀತಿಯ ಚಂದಾದಾರಿಕೆ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಎಂದಿನಂತೆ ಯಾವುದೇ ಅಡೆತಡೆ ಇಲ್ಲದೆ ನಿಮ್ಮಿಷ್ಟದ ವಿಡಿಯೋಗಳನ್ನು ಸ್ಟ್ರೀಮ್ ಮಾಡಬಹುದಾಗಿದೆ. ಅಲ್ಲದೆ ಜನರು ಈ ರೀತಿಯ ಚಂದಾದಾರಿಕೆ ವಿಭಾಗಕ್ಕೆ ಎಂಟ್ರಿ ಕೊಡಲಿ ಅನ್ನೋದು ಸಹ ಯೂಟ್ಯೂಬ್‌ನ ಗುರಿಯೂ ಆಗಿರಬಹುದು.
ಈ ನಡುವೆ ಜಾಹೀರಾತು ಬ್ಲಾಕರ್‌ಗಳು ಯೂಟ್ಯೂಬ್ ಕೆಂಗಣ್ಣಿಗೆ ಗುರಿಯಾಗಿವೆ. ಬಳಕೆದಾರರು ಥರ್ಡ್ ಪಾರ್ಟಿ ಆಪ್‌ಗಳನ್ನು ಬಳಕೆ ಮಾಡಿಕೊಂಡು ಜಾಹೀರಾತುಗಳಿಗೆ ಬ್ರೇಕ್ ಹಾಕುತ್ತಿದ್ದಾರೆ. ಈ ಸಂಬಂಧ ಕಳೆದ ವರ್ಷದಿಂದ, ವಿಶ್ವದ ಅತಿದೊಡ್ಡ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಾಹೀರಾತುಗಳು ಪಾಪ್ ಅಪ್ ಆಗುವುದನ್ನು ತಡೆಯುವ ಜಾಹೀರಾತು ಬ್ಲಾಕರ್‌ಗಳನ್ನು ಸಕ್ರಿಯವಾಗಿ ಬಳಸುವ ಬಳಕೆದಾರರ ಮೇಲೆ ಈಗ ಯೂಟ್ಯೂಬ್ ತನ್ನ ಗಮನವನ್ನು ಕೇಂದ್ರೀಕರಿಸಿದೆ.
ಈ ನಡುವೆ ಏಪ್ರಿಲ್ 15 ರಂದು ಸಹ ಥರ್ಡ್ ಪಾರ್ಟಿ ಜಾಹೀರಾತು ಬ್ಲಾಕರ್‌ಗಳೇ ತಮ್ಮ ಮುಂದಿನ ಗುರಿ ಎಂದು ಯೂಟ್ಯೂಬ್ ಅಧಿಕೃತವಾಗಿ ಹೇಳಿಕೆ ನೀಡಿದೆ. ಇದರ ಪ್ರಕಾರ ಯಾರೆಲ್ಲಾ ಆಡ್ ಬ್ಲಾಕರ್ ಬಳಕೆ ಮಾಡುತ್ತಿದ್ದಾರೋ ಅವರು ವಿವಿಧ ರೀತಿಯಲ್ಲಿ ಸ್ಕ್ರೀಮಿಂಗ್ ಸಮಸ್ಯೆಗಳನ್ನು ಎದುರಿಸಲಿದ್ದಾರೆ.


Click it and Unblock the Notifications








