YouTube ನಲ್ಲಿ ಇನ್ಮುಂದೆ ಬೇರೆಯವರ ವಿಡಿಯೋ ಕದಿಯಲು ಸಾಧ್ಯವಿಲ್ಲ! ಯಾಕಂದ್ರೆ!?
ಯೂಟ್ಯೂಬ್ ಇಂದು ಬಳಕೆದಾರರ ನೆಚ್ಚಿನ ವಿಡಿಯೋ ಸ್ಕ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಅದರಲ್ಲೂ ಇತ್ತೀಚೆಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಯೂಟ್ಯೂಬ್ ಇನ್ನಷ್ಟು ಆಕರ್ಷಿತವಾಗಿದ್ದು, ಇದರಿಂದ ಬಳಕೆದಾರರು ಹಾಗೂ ಕ್ರಿಯೇಟರ್ಸ್ ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಯೂಟ್ಯೂಬ್ ಈ ರೀತಿಯ ಚಾನಲ್‌ಗಳಿಗೆ ಬರೆ ಎಳೆಯಲು ಮುಂದಾಗಿದೆ.
ಹೌದು, ಯೂಟ್ಯೂಬ್‌ನ ಹೊಸ ನೀತಿ ಹಿನ್ನೆಲೆ ಇನ್ಮುಂದೆ ಯಾರೂ ನಿಮ್ಮ ಕಂಟೆಂಟ್ ಅನ್ನು ಕದಿಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕೆಲವು ನೀತಿಗಳನ್ನು ನವೀಕರಿಸಲಾಗಿದೆ. ಈ ಮೂಲಕ ಉತ್ತಮ ಕಂಟೆಂಟ್ ಯೂಟ್ಯೂಬ್‌ಗಳಲ್ಲಿ ಲಭ್ಯ ಆಗುವಂತೆ ಮಾಡಲಾಗುತ್ತಿದೆ. ಹಾಗಿದ್ರೆ, ಏನಿದು ಯೂಟ್ಯೂಬ್‌ನ ಹೊಸ ರೂಲ್ಸ್?, ಇದರಿಂದ ಯಾರಿಗೆಲ್ಲಾ ಸಂಕಷ್ಟ?, ಯಾರಿಗೆ ಲಾಭ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ನಕಲಿ ಖಾತೆಗಳ ವಿರುದ್ಧ ಕ್ರಮ: ಈಗಾಗಲೇ ಯೂಟ್ಯೂಬ್‌ನಲ್ಲಿ ಹಲವಾರು ಭದ್ರತಾ ಫೀಚರ್ಸ್‌ಗಳಿಗೆ ಅವುಗಳ ಸಾಲಿಗೆ ಈ ಹೊಸ ಫೀಚರ್ಸ್ ಸಹ ಲಭ್ಯ ಆಗುತ್ತಿದ್ದು, ಈ ನಡುವೆ ಬಳಕೆದಾರರನ್ನು ನಕಲಿ ಖಾತೆಗಳಿಂದ ರಕ್ಷಿಸಲು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಂದರೆ ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಾದರೂ ಸಹ ಫೇಮಸ್ ವ್ಯಕ್ತಿಗಳ ಹೆಸರಲ್ಲಿ ಹಲವಾರು ಅಭಿಮಾನಿ ಖಾತೆಗಳು ತಲೆ ಎತ್ತುತ್ತವೆ.
ಅದರಲ್ಲೂ ಪ್ರಮುಖವಾಗಿ ಜನಪ್ರಿಯ ನಟರು, ಗಾಯಕರು ಮತ್ತು ಸೆಲೆಬ್ರಿಟಿಗಳ ಅಸಂಖ್ಯಾತ ಅಭಿಮಾನಿಗಳ ಖಾತೆಗಳು ಎಲ್ಲೆಡೆ ಕಂಡುಬರುತ್ತವೆ. ಈ ಅಭಿಮಾನಿಗಳ ಖಾತೆಗಳ (ಫ್ಯಾನ್ಸ್ ಪೇಜ್) ಮೂಲಕ ಜನರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ವೀಕ್ಷಣೆ ಮಾಡುತ್ತಾರೆ. ಆದರೆ, ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ನಿಜವಾದ ಅಭಿಮಾನಿಗಳ ಖಾತೆಗೂ ನಕಲಿ ಖಾತೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.
ಈ ಕಾರಣಕ್ಕಾಗಿಯೇ ಇದೀಗ ಯೂಟ್ಯೂಬ್ ನೀತಿಯನ್ನು ನವೀಕರಿಸಿದ್ದು, ಅದು ನಿರ್ದಿಷ್ಟವಾಗಿ ನಕಲಿ ಖಾತೆಗಳನ್ನು ಗುರಿಯಾಗಿಸಿಕೊಂಡಿದೆ. ಅದರಂತೆ ಈ ಹೊಸ ನೀತಿಯು 21 ಆಗಸ್ಟ್ 2023 ರಿಂದ ಅನ್ವಯವಾಗಲಿದ್ದು, ಈ ಮೂಲಕ ಈ ಪ್ಲಾಟ್‌ಫಾರ್ಮ್‌ನಲ್ಲಿ ಕಂಡುಬರುವ ನಕಲಿ ಅಥವಾ ನಕಲು ಫ್ಯಾನ್ಸ್ ಪೇಜ್ ವಿರುದ್ಧ ಯೂಟ್ಯೂಬ್ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಹಲವಾರು ನಕಲಿ ಖಾತೆಗಳು ನಿರ್ಬಂಧ ಆಗಲಿವೆ.
ಯೂಟ್ಯೂಬ್‌ನ ಹೊಸ ನೀತಿಯಲ್ಲೇನಿದೆ ?: ಅಭಿಮಾನಿಗಳ ಖಾತೆಗಳಿಗಾಗಿ ಯೂಟ್ಯೂಬ್ ತನ್ನ ನೀತಿಯನ್ನು ನವೀಕರಿಸಿದ್ದು, ಅದರಂತೆ ಈ ಅಭಿಮಾನಿ ಖಾತೆಯು ಮೂಲ ಕ್ರಿಯೇಟರ್ಸ್ ಖಾತೆಯಿಂದ ಕಂಟೆಂಟ್ ಅನ್ನು ಕದಿಯುವುದಿಲ್ಲ ಎಂದು ಸ್ಪಷ್ಟನೆ ನೀಡಬೇಕಿದೆ. ಅದಾಗ್ಯೂ ನೀವು ಫ್ಯಾನ್ಸ್ ಪೇಜ್ ಖಾತೆ ಹೊಂದಿದ್ದು, ನಿಮ್ಮ ಚಾನಲ್ ಮೂಲ ಕ್ರಿಯೇಟರ್ಸ್ ಅನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ಸಹ ಚಾನಲ್‌ನ ಹೆಸರಿನಲ್ಲಿ ಸ್ಪಷ್ಟಪಡಿಸಬೇಕು ಎಂದು ತಿಳಿಸಿದೆ.

ಈ ಬದಲಾವಣೆ ಯಾಕಾಗಿ?: ಈಗಾಗಲೇ ಈ ರೀತಿಯ ಹಲವಾರು ಯೂಟ್ಯೂಬ್ ಚಾನಲ್‌ಗಳು ಅಸ್ತಿತ್ವದಲ್ಲಿವೆ. ಇವುಗಳಿಂದ ಜನರಲ್ಲಿ ನಿಜವಾದ ಚಾನಲ್ ಯಾವುದು ಎಂಬ ಗೊಂದಲ ಉಂಟಾಗುತ್ತದೆ. ಹಾಗೆಯೇ ಈ ರೀತಿಯ ಯಾವುದೇ ಚಾನಲ್‌ನಲ್ಲಿ ಏನೇ ಕಂಟೆಂಟ್ ಕಂಡುಬಂದರೂ ಅದನ್ನು ಜನರು ಸುಲಭವಾಗಿ ನಂಬಿಬಿಡುತ್ತಾರೆ. ಅದೆಲ್ಲಕ್ಕೂ ಮಿಗಿಲಾಗಿ ಕೆಲವರು ನಕಲಿ ಖಾತೆಗಳನ್ನು ರಚಿಸುವ ಮೂಲಕ ಮೂಲ ಕ್ರಿಯೇಟರ್ಸ್‌ಗಳ ಸಾಮರ್ಥ್ಯವನ್ನೆಲ್ಲಾ ಹಾಳು ಮಾಡುತ್ತಿದ್ದಾರೆ. ಅಂದರೆ ಅವರ ವಿಡಿಯೋವನ್ನು ಸುಲಭವಾಗಿ ಕದ್ದು ತಮ್ಮ ಚಾನಲ್‌ನಲ್ಲಿ ಹಾಕಿಕೊಳ್ಳುತ್ತಿದ್ದಾರೆ.
ಈ ರೀತಿಯ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ಯೂಟ್ಯೂಬ್ ಈ ಮಹತ್ವದ ಹೆಜ್ಜೆ ಇರಿಸಿದೆ. ಅದರಂತೆ ಯೂಟ್ಯೂಬ್‌ನ ಈ ಹೊಸ ಅಪ್‌ಡೇಟ್‌ನ ಪ್ರಮುಖ ಉದ್ದೇಶವು ನಕಲಿ ಚಾನಲ್‌ಗಳಿಂದ ಮೂಲ ಕ್ರಿಯೇಟರ್ಸ್‌ಗಳ ಶ್ರಮ ಮತ್ತು ಕಂಟೆಂಟ್ ಅನ್ನು ಉಳಿಸುವುದೇ ಆಗಿದೆ. ಇದರಿಂದ ನಿಜವಾದ ಕ್ರಿಯೇಟರ್ಸ್‌ಗಳಿಗೆ ಸಿಗಬೇಕಾದ ಬೆಲೆ ಸಿಗುತ್ತದೆ.
ಇದರ ನಡುವೆ ಯೂಟ್ಯೂಬ್‌ನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ವಿವಿಧ ಭಾಷೆಗಳಿಗೆ ವಿಡಿಯೋಗಳನ್ನು ಡಬ್ಬಿಂಗ್ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಹೊಸ ಫೀಚರ್ಸ್ ಅನ್ನು ಸಹ ಪರಿಚಯಿಸಿದೆ. ವೈವಿಧ್ಯಮಯ ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಸೇವೆ ಒದಗಿಸುವ ಪ್ರಾಮುಖ್ಯತೆಯನ್ನು ಯೂಟ್ಯೂಬ್ ಹೊಂದಿದ್ದು, ಈ ಕಾರಣಕ್ಕೆ ಈ ಫೀಚರ್ಸ್ ಸೇರಿಸಲಾಗಿದೆ ಎಂದು ತಿಳಿಸಿದೆ.


Click it and Unblock the Notifications








