ಯೂಟ್ಯೂಬ್ ವೀಕ್ಷಕರೇ ಗಮನಿಸಿ; ಇನ್ಮುಂದೆ ಕಿರಿಕಿರಿ ನೀಡುವ ಈ ಜಾಹೀರಾತಿನಿಂದ ನೀವು ಮುಕ್ತರು!
ಸಾಮಾನ್ಯವಾಗಿ ಪ್ರತಿಯೊಬ್ಬರು ಯೂಟ್ಯೂಬ್ ಬಳಕೆ ಮಾಡೇ ಮಾಡುತ್ತಾರೆ. ಇದರ ನಡುವೆ ಏನಾದರೂ ಇಂಟ್ರೆಸ್ಟಿಂಗ್ ಮಾಹಿತಿಯನ್ನು ವೀಕ್ಷಣೆ ಮಾಡುವಾಗ ಕೆಲವು ಜಾಹೀರಾತುಗಳು ಕಾಣಿಸಿಕೊಂಡು ಭಾರೀ ಕಿರಿಕಿರಿ ಉಂಟು ಮಾಡುತ್ತವೆ. ಆದರೆ, ಯೂಟ್ಯೂಬ್‌ನ ಈ ಹೊಸ ನಿರ್ಧಾರದಿಂದ ಇನ್ಮುಂದೆ ಯಾವುದೇ ಸಮಸ್ಯೆ ಇಲ್ಲದೆ ವಿಡಿಯೋಗಳನ್ನು ವೀಕ್ಷಣೆ ಮಾಡಬಹುದು.
ಹೌದು, ಯಾವುದೇ ಆಪ್‌ಗಳಾಗಲಿ ಅಥವಾ ಪ್ಲಾಟ್‌ಫಾರ್ಮ್‌ಗಳಾಗಲಿ ಅವು ಹೆಚ್ಚಿನ ಆದಾಯಕ್ಕೆ ಜಾಹೀರಾತನ್ನೇ ಅವಲಂಬಿಸಿಕೊಂಡಿರುತ್ತವೆ. ಅದರಂತೆ ಯೂಟ್ಯೂಬ್‌ನಲ್ಲಿ ಯಾವುದಾದರೂ ಒಂದು ವಿಡಿಯೋ ಪ್ಲೇ ಮಾಡಿದರೆ ವಿವಿಧ ರೀತಿಯ ಜಾಹೀರಾತುಗಳು ಕಾಣಿಸಿಕೊಂಡು ಬೇಸರ ಉಂಟು ಮಾಡುತ್ತವೆ. ಆದರೆ, ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ. ಯಾಕೆಂದರೆ ಯೂಟ್ಯೂಬ್ ಓವರ್‌ಲೇ ಜಾಹೀರಾತುಗಳ ಪ್ರಸಾರ ನಿಲ್ಲಿಸಲು ಮುಂದಾಗಿದೆ. ಹಾಗಿದ್ರೆ, ಓವರ್‌ಲೇ ಆಡ್ಸ್ ಅಂದರೆ ಏನು?, ಯಾವ ಕಾರಣಕ್ಕೆ ಯೂಟ್ಯೂಬ್ ಈ ನಿರ್ಧಾರ ಮಾಡಿದೆ ಎನ್ನುವುದನ್ನು ತಿಳಿಯಿರಿ.

ಯೂಟ್ಯೂಬ್‌ನಲ್ಲಿ ಓವರ್‌ಲೇ ಜಾಹೀರಾತುಗಳಿಗೆ ಕಡಿವಾಣ
ಗೂಗಲ್ ಮಾಲೀಕತ್ವದ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಯೂಟ್ಯೂಬ್‌ನಲ್ಲಿ ಈವರೆಗೂ ಕಾಣಿಸಿಕೊಳ್ಳುತ್ತಿದ್ದ ಓವರ್‌ಲೇ ಜಾಹೀರಾತುಗಳು ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದು ಯೂಟ್ಯೂಬ್ ಮಾಹಿತಿ ನೀಡಿದೆ. ಜೊತೆಗೆ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಡಿವೈಸ್‌ಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಜಾಹೀರಾತು ಸ್ವರೂಪಗಳಿಗೆ ಇದನ್ನು ಬದಲಾಯಿಸಲು ಯೂಟ್ಯೂಬ್ ಮುಂದಾಗಿದೆ ಎಂದು ಕಂಪೆನಿ ತಿಳಿಸಿದೆ.
ಎಂದಿನಿಂದ ಈ ಜಾಹಿರಾತುಗಳಿಗೆ ಮುಕ್ತಿ?
ಓವರ್‌ಲೇ ಜಾಹೀರಾತುಗಳು ವೀಕ್ಷಕರಿಗೆ ವೀಕ್ಷಣೆಗೆ ಅಡ್ಡಿಯಾಗುವ ಜಾಹೀರಾತು ಸ್ವರೂಪವಾಗಿದೆ. ಇದು ಇತರ ಜಾಹೀರಾತು ಸ್ವರೂಪಗಳಿಗೆ ಬದಲಾಗುವುದರಿಂದ ಹೆಚ್ಚಿನ ಕ್ರಿಯೇಟರ್ಸ್‌ಗೆ ಸೀಮಿತ ಪರಿಣಾಮ ಉಂಟಾಗುವುದನ್ನು ನಾವು ನಿರೀಕ್ಷಿಸುತ್ತೇವೆ ತಿಳಿಸಿರುವ ಯೂಟ್ಯೂಬ್ ಇದೇ ಏಪ್ರಿಲ್ 6 ರಿಂದ ಪ್ರಾರಂಭವಾಗುವ ಈ ಓವರ್‌ಲೇ ಜಾಹೀರಾತುಗಳು ಕಾಣಿಸಿಕೊಳ್ಳುವುದಿಲ್ಲ ಎಂದು ಉಲ್ಲೇಖಿಸಿದೆ.

ಓವರ್‌ಲೇ ಜಾಹೀರಾತು ಎಂದರೆ ಏನು?
ಜಾಹೀರಾತು ವಿಭಾಗದಲ್ಲಿ ಹಲವು ರೀತಿಯ ಜಾಹೀರಾತುಗಳಿದ್ದು, ಅದರಲ್ಲಿ ಓವರ್‌ಲೇ ಜಾಹೀರಾತು ಸಹ ಪ್ರಮುಖವಾಗಿದೆ. ಇವು ಹೆಚ್ಚಾಗಿ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಇವು ವಿಡಿಯೋ ಪ್ಲೇ ಆಗುವಾಗ ವಿಡಿಯೋದ ಕೆಳಭಾಗದಲ್ಲಿ ಪಾಪ್-ಅಪ್ ಕಾರ್ಡ್‌ಗಳಂತೆ ಗೋಚರಿಸುತ್ತವೆ. ಇದರಲ್ಲಿ ಚಿತ್ರ ಹಾಗೂ ಟೆಕ್ಸ್ಟ್ ಇರುವ ಮಾಹಿತಿ ಇರುತ್ತದೆ. ಇದನ್ನು ಅನಗತ್ಯ ಎಂದಲ್ಲಿ ಆ ಫೋಟೋದ ಮೇಲೆ ಕಾಣಿಸಿಕೊಳ್ಳುವ 'x' ಎಂಬ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ತೆಗೆದುಹಾಕಬಹುದು.
ಹಾಗೆಯೇ ಈ ಜಾಹೀರಾತು ಏನಾದರೂ ಇಷ್ಟವಾದರೆ ನೀವು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ಮೂಲಕ ಇದು ಬಳಕೆದಾರರಿಗೆ ಆಯ್ಕೆಯನ್ನು ನೀಡುತ್ತದೆ. ಅದರಂತೆ ಯೂಟ್ಯೂಬ್ ಯಾವ ಉದ್ದೇಶಕ್ಕೆ ಈ ಓವರ್‌ಲೇ ಜಾಹೀರಾತು ನಿರ್ಬಂಧಿಸಲು ಮುಂದಾಗಿದೆ ಎನ್ನುವುದನ್ನು ಇಲ್ಲಿ ಗಮನಿಸಿ.

ಬಳಕೆದಾರರ ವೀಕ್ಷಣಾ ಅನುಭವ ಹೆಚ್ಚಿಗೆ ಮಾಡಲು ಈ ನಿರ್ಧಾರ
ಈ ಜಾಹೀರಾತುಗಳು ಹೆಚ್ಚಾಗಿ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ವೀಕ್ಷಣೆ ಮಾಡುವವರಿಗೆ ಕಾಣಿಸಿಕೊಳ್ಳಲಿದ್ದು, ಇದರಿಂದ ವೀಕ್ಷಕರ ಅನುಭವವನ್ನು ಹೆಚ್ಚು ಸುಧಾರಿಸಲು ಈ ನಿರ್ಧಾರ ಮಾಡಲಾಗಿದೆ ಎಂದು ಯೂಟ್ಯೂಬ್ ತಿಳಿಸಿದೆ. ಈ ಜಾಹೀರಾತುಗಳು ವೀಕ್ಷಕರ ಗಮನವನ್ನು ಬೇರೆಡೆ ಸೆಳೆದು ಅವರಿಗೆ ಅಡ್ಡಿಯುಂಟು ಮಾಡುತ್ತಿದ್ದವು ಎಂಬುದನ್ನು ಯೂಟ್ಯೂಬ್ ಕಂಡುಕೊಂಡಿದೆ. ಜೊತೆಗೆ ಇನ್ನಿತರೆ ಯಾವುದೇ ಜಾಹೀರಾತಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದೂ ಸಹ ಇದೇ ವೇಳೆ ಯೂಟ್ಯೂವ್ ತಿಳಿಸಿದೆ.
ಇದರ ನಡುವೆ ಯೂಟ್ಯೂಬ್‌ನಲ್ಲಿ ಪಾಡ್‌ಕಾಸ್ಟ್‌ಗಳ ಸೇವೆಯನ್ನು ಅತ್ಯಂತ ಸುಲಭವಾಗಿ ಪಡೆದುಕೊಳ್ಳುವ ಸೌಲಭ್ಯದ ಬಗ್ಗೆಯೂ ಕೆಲವು ವಾರಗಳ ಹಿಂದಷ್ಟೇ ಘೋಷಣೆ ಮಾಡಿತ್ತು. ಅಂದರೆ ಬಳಕೆದಾರರು ಪಾಡ್‌ಕಾಸ್ಟ್‌ಗಳನ್ನು ಅಪ್‌ಲೋಡ್ ಮಾಡುವ ಸಂಬಂಧ ಹೊಸ ಟೂಲ್ಸ್ ನಲ್ಲಿ ಯೂಟ್ಯೂಬ್ ಕೆಲಸ ಮಾಡಲು ಮುಂದಾಗಿದೆ. ಅದರಂತೆ ಯೂಟ್ಯೂಬ್ ಸ್ಟುಡಿಯೋ ಮೂಲಕ ಇದನ್ನು ಮೇಲ್ವಿಚಾರಣೆ ಮಾಡಲು ಸಹ ಅನುವು ಮಾಡಿಕೊಡಲು ಮುಂದಾಗಿದೆ.


Click it and Unblock the Notifications








