YouTube ನಲ್ಲಿ ಸದ್ದಿಲ್ಲದೆ ಎಂಟ್ರಿಯಾಯ್ತು ಹೊಸ ಫೀಚರ್ಸ್, ಗಮನಿಸಿದ್ದೀರಾ!?
ಯೂಟ್ಯೂಬ್(YouTube) ಇಲ್ಲದ ಸ್ಮಾರ್ಟ್‌ಫೋನ್‌ಗಳೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಮಾಹಿತಿ ಹಾಗೂ ಮನರಂಜನೆ ಜೊತೆಗೆ ಲೈವ್ ಸ್ಕ್ರೀಮಿಂಗ್‌ಆಯ್ಕೆಯನ್ನೂ ಸಹ ಯೂಟ್ಯೂಬ್ ಕಲ್ಪಿಸಿಕೊಟ್ಟಿದ್ದು, ಇದರಿಂದಾಗಿ ಬಳಕೆದಾರರು ವಿವಿಧ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಹೌದು, ಯೂಟ್ಯೂಬ್ ಅನ್ನು ಬಹುಪಾಲು ಎಲ್ಲರೂ ಬಳಕೆ ಮಾಡುತ್ತಿದ್ದು, ಅದರಂತೆ ಯೂಟ್ಯೂಬ್ ಸಹ ಹೊಸ ಫೀಚರ್ಸ್ ಅನ್ನು ನೀಡುತ್ತಲೇ ಬರುತ್ತಿದೆ. ಆದರೆ ಈ ಬಾರಿ ಸದ್ದಿಲ್ಲದೆ ಹೊಸ ಸೌಲಭ್ಯವೊಂದನ್ನು ಕಲ್ಪಿಸಿಕೊಟ್ಟಿದ್ದು, ಈ ಮೂಲಕ ಬಳಕೆದಾರರಿಗೆ ಹಲವು ರೀತಿಯಲ್ಲಿ ಅನುಕೂಲ ಆಗಲಿದೆ. ಹಾಗಿದ್ರೆ, ಯೂಟ್ಯೂಬ್‌ನ ಹೊಸ ಫೀಚರ್ಸ್ ಏನು?, ಇದರಿಂದ ಏನೆಲ್ಲಾ ಲಾಭ? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಈ ಲೇಖನ ಓದಿರಿ.

'ಸ್ಥಿರ ವಾಲ್ಯೂಮ್' ಫೀಚರ್ಸ್: ಯೂಟ್ಯೂಬ್‌ನಲ್ಲಿ ಇದೀಗ ಸ್ಥಿರ ವಾಲ್ಯೂಮ್ (Stable Volume) ಫೀಚರ್ಸ್ ಪರಿಚಯಿಸಲಾಗಿದೆ. ಇದು ವಾಲ್ಯೂಮ್ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ವಿಡಿಯೋ ಪ್ಲೇಬ್ಯಾಕ್ ಸಮಯದಲ್ಲಿ ಹಠಾತ್ ಏರಿಕೆ ಅಥವಾ ಕುಸಿತವನ್ನು ನಿಯಂತ್ರಣ ಮಾಡುತ್ತದೆ. ಜೊತೆಗೆ ಆಗಾಗ್ಗೆ ವಾಲ್ಯೂಮ್ ಹೊಂದಾಣಿಕೆಗಳಿಲ್ಲದೆ ಬಳಕೆದಾರರಿಗೆ ತಡೆರಹಿತ ವೀಕ್ಷಣೆಯ ಅನುಭವವನ್ನು ನೀಡಲಿದೆ.
ಇನ್ನು ಈ ವಿಶೇಷ ಫೀಚರ್ಸ್ ಅನ್ನು ರೆಡ್ಡಿಟರ್ ಮತ್ತು ಯೂಟ್ಯೂಬರ್ ಎಂ. ಬ್ರ್ಯಾಂಡನ್ ಲೀ ಸೇರಿದಂತೆ ಇತರೆ ಬಳಕೆದಾರರು ಪತ್ತೆ ಮಾಡಿದ್ದಾರೆ. ಈ ಫೀಚರ್ಸ್ ವಿಭಿನ್ನ ವಿಡಿಯೋಗಳಾದ್ಯಂತ ವಾಲ್ಯೂಮ್ ಮಟ್ಟವನ್ನು ನಿಯಂತ್ರಿಸುವ ಮತ್ತು ಸ್ಥಿರಗೊಳಿಸುವ ಕೆಲಸ ಮಾಡಲಿದೆ. ಈ ಫೀಚರ್ಸ್ ಅನ್ನು ನೀವು ಸೆಟ್ಟಿಂಗ್‌ಗಳ ಪೇಜ್‌ನಲ್ಲಿನ ಆಂಬಿಯೆಂಟ್ ಮೋಡ್ ಆಯ್ಕೆಯ ಕೆಳಗೆ ಕಾಣಬಹುದು.
ವಿಡಿಯೋಗಳಲ್ಲಿನ ವಾಲ್ಯೂಮ್ ಮಟ್ಟವನ್ನು ಅತ್ಯುತ್ತಮವಾಗಿಸಲು ಕೃತಕ ಬುದ್ಧಿಮತ್ತೆ (AI) ಅನ್ನು ಬಳಸಲಾಗಿದೆಯೇ ಎಂಬುದು ಅಸ್ಪಷ್ಟವಾಗಿದ್ದರೂ, ತಾಂತ್ರಿಕ ಪ್ರಗತಿಗಳ ಮೂಲಕ ಬಳಕೆದಾರರ ಅನುಭವವನ್ನು ಸುಧಾರಿಸಲು ಯೂಟ್ಯೂಬ್ ನ ಬದ್ಧತೆಯನ್ನು ಈ ಫೀಚರ್ಸ್ ಎತ್ತಿ ತೋರಿಸಿದೆ. ಅದಾಗ್ಯೂ ಈ ಸ್ಥಿರ ವಾಲ್ಯೂಮ್ ಫೀಚರ್ಸ್ ಅನ್ನು ಎಲ್ಲಾ ಯೂಟ್ಯೂಬ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ. ಯಾಕೆಂದರೆ ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಕ್ರಮೇಣ ಹೊರತರಲಾಗುತ್ತಿದೆ ಎನ್ನಲಾಗಿದೆ.
ಈ ಸ್ಥಿರ ವಾಲ್ಯೂಮ್ ಫೀಚರ್ಸ್‌ನೊಂದಿಗೆ ಇತರೆ ಫೀಚರ್ಸ್ ಅನ್ನು ಸಹ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಲಾಕ್ ಸ್ಕ್ರೀನ್ ಫೀಚರ್ಸ್ ಪ್ರಮುಖವಾಗಿದೆ. ಇದು ವಿಡಿಯೋಗಳನ್ನು ವೀಕ್ಷಿಸುವಾಗ ಟಚ್ ಇನ್‌ಪುಟ್ ಅನ್ನು ನಿಷ್ಕ್ರಿಯಗೊಳಿಸಲು ಸಹಾಯ ಮಾಡಲಿದೆ. ಅಂದರೆ ನೀವು ವಿಡಿಯೋ ಸ್ಕ್ರೀಮ್ ಮೇಲೆ ಕಾಣಿಸಿಕೊಳ್ಳುವ ಲಾಕ್ ಬಟನ್ ಮೇಲೆ ಟ್ಯಾಪ್ ಮಾಡಿ ಫೋನ್ ಅನ್ನು ಜೇಬಿನಲ್ಲಿ ಇರಿಸಿಕೊಳ್ಳಬಹುದು ಅಥವಾ ಬ್ಯಾಗ್‌ನಲ್ಲಿ ಇರಿಸಿಕೊಳ್ಳಬಹುದು. ಈ ಮೂಲಕ ಆಕಸ್ಮಿಕ ಟ್ಯಾಪ್‌ಗಳನ್ನು ತಡೆಯಬಹುದು.

ಉಳಿದಂತೆ ಯೂಟ್ಯೂಬ್ ಮೊಬೈಲ್ ಅಪ್ಲಿಕೇಶನ್ ಹೋಮ್ ಫೀಡ್‌ನಲ್ಲಿ ಎಐ ರಚಿತವಾದ ರಸಪ್ರಶ್ನೆಗಳನ್ನು ಪ್ರಯೋಗಿಸುತ್ತಿದೆ. ಈ ರಸಪ್ರಶ್ನೆಗಳು ಬಳಕೆದಾರರಿಗೆ ಆಸಕ್ತಿಯಿರುವ ಕಂಟೆಂಟ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ. ಈ ಮೂಲಕ ಬಳಕೆದಾರರು ಸಂವಾದಾತ್ಮಕ ಮತ್ತು ಶೈಕ್ಷಣಿಕ ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿ ಆಗಲಿದೆ. ಆದರೆ ಈ ಫೀಚರ್ಸ್ ಸಹ ಇನ್ನೂ ಎಲ್ಲರಿಗೂ ಮುಕ್ತವಾಗಿಲ್ಲ.
ಯೂಟ್ಯೂಬ್‌ನಲ್ಲಿ ಹೆಚ್ಚುತ್ತಿದೆ ಮೋಸದ ಜಾಲ: ಈ ನಡುವೆ ಕೆಲವು ಸ್ಕ್ಯಾಮರ್‌ಗಳು ಯೂಟ್ಯೂಬ್ ಬಳಕೆ ಮಾಡಿಕೊಂಡು ಮೋಸ ಮಾಡಲು ಮುಂದಾಗಿದ್ದಾರೆ. ಅಂದರೆ ಯೂಟ್ಯೂಬ್ ವಿಡಿಯೋ ಲೈಕ್ ಮಾಡುವ ಮೂಲಕ ಹಾಗೂ ಚಾನಲ್‌ಗೆ ಚಂದಾದಾರಾಗುವ ಮೂಲಕ ಹಣ ಸಂಪಾದನೆ ಮಾಡಬಹುದು ಎಂದು ನಂಬಿಸಿ ಬಳಕೆದಾರರಿಗೆ ತಮ್ಮದೇ ಆದ ಟಾಸ್ಕ್‌ಗಳನ್ನು ನೀಡಿ ಲಕ್ಷ ಲಕ್ಷ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಆದರೆ ಈ ರೀತಿಯ ಯಾವುದೇ ಕೆಲಸಗಳು ಇಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ.


Click it and Unblock the Notifications








