ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆದ ಕನ್ನಡ ಸಂಭ್ರಮ..! ನಮೋ, ರಾಷ್ಟ್ರಪತಿ ಶುಭಾಶಯ..!
ಕರ್ನಾಟಕದಾದ್ಯಂತ ಇಂದು ಸಂಭ್ರಮದ 63ನೇ ಕನ್ನಡ ರಾಜ್ಯೋತ್ಸವದ ಆಚರಣೆ ನಡೆಯುತ್ತಿದೆ. ಕನ್ನಡದ ಹಬ್ಬವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತಿದ್ದು, ವಾಟ್ಸ್‌ಆಪ್ ಸ್ಟೇಟಸ್, ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಮತ್ತೀತರ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

ವಿಶೇಷವಾಗಿ 63ನೇ ಕನ್ನಡ ರಾಜ್ಯೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಶುಭ ಕೋರಿದ್ದಾರೆ. ಕರ್ನಾಟಕ ಶ್ರೀಮಂತ ಪರಂಪರೆ ಹೊಂದಿದ್ದು, ಅನೇಕ ಕ್ಷೇತ್ರಗಳ ಸಾಧಕರ, ಪ್ರತಿಭಾವಂತರ ಮೂಲ ಸ್ಥಳವಾಗಿದೆ ಎಂದು ಮೋದಿ ಶ್ಲಾಘಿಸಿದ್ದಾರೆ. ಇನ್ನು ಅನೇಕ ಸೆಲೆಬ್ರಿಟಿಗಳು ಕನ್ನಡ ರಾಜ್ಯೋತ್ಸವದ ಬಗ್ಗೆ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. ಟ್ವೀಟ್‌ನಲ್ಲಿ ಯಾರು..? ಹೇಗೆಲ್ಲಾ ಶುಭ ಕೋರಿದ್ದಾರೆ ನೋಡಿ.
ನಮೋ ಕನ್ನಡ ಟ್ವೀಟ್
ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಕನ್ನಡದಲ್ಲಿ ಶುಭ ಕೋರಿದ್ದು, ಇಂಗ್ಲಿಷ್‌ನಲ್ಲೂ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ಬೆಂಗಳೂರು ಎಫ್‌ಸಿ ಕನ್ನಡ ಪ್ರೇಮ
ಬೆಂಗಳೂರು ಫುಟ್ಬಾಲ್ ಕ್ಲಬ್ ಕನ್ನಡದಲ್ಲಿಯೇ ರಾಜ್ಯೋತ್ಸವದ ಶುಭ ಕೋರಿದೆ. ಹಚ್ಚೇವು ಕನ್ನಡದ ದೀಪ. ಹಾಡೇವು BFC ಹಾಡ. ಸಮಸ್ತ ಕನ್ನಡಿಗರಿಗೆ, BFC ಕುಟುಂಬದ ವತಿಯಿಂದ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ಎಂದು ಶುಭಾಶಯ ಕೋರಿದ್ದು, ರಾಜಕುಮಾರ್ ಅವರ ಭಾವಚಿತ್ರವನ್ನು ಪೋಸ್ಟ್‌ನಲ್ಲಿ ಬಳಸಿಕೊಂಡಿದೆ.
ರಾಷ್ಟ್ರಪತಿ ಕೋವಿಂದ್ ಟ್ವೀಟ್
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಹರಿಯಾಣಾ, ಪಂಜಾಬ್, ಛತ್ತೀಸ್‌ಗರ್, ಲಕ್ಷದ್ವೀಪಗಳ ರಚನಾ ದಿನಕ್ಕೆ ಶುಭ ಕೋರಿದ್ದಾರೆ. ಆಯಾ ರಾಜ್ಯದ ಭಾಷೆಗಳಲ್ಲಿ ಶುಭಕೋರಿರುವ ರಾಷ್ಟ್ರಪತಿಗಳು ಕನ್ನಡದಲ್ಲಿ ಶುಭ ಕೋರಿದ್ದಾರೆ. ಕರ್ನಾಟಕ ರಾಜ್ಯೋತ್ಸವದ ಈ ದಿನದಂದು, ಕರ್ನಾಟಕದ ಜನತೆಗೆ ಹಾರ್ಧಿಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ, ಕರ್ನಾಟಕ ರಾಜ್ಯ ಹಾಗೂ ನಮ್ಮ ದೇಶವು ಇನ್ನೂ ಉನ್ನತ ಮಟ್ಟಕ್ಕೇರಲಿ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಪವನ್ ಕಲ್ಯಾಣ್ ಕೂಡ ವಿಷ್
ತೆಲುಗಿನ ಜನಪ್ರಿಯ ನಟ ಪವನ್ ಕಲ್ಯಾಣ್ ಕೂಡ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಇರುವ ಫೋಟೋ ಹಾಕಿ 63ನೇ ಕನ್ನಡ ರಾಜ್ಯೋತ್ಸವದ ಸಂದಭ೯ವಾಗಿ ಸಮಸ್ತ ಕನ್ನಡ ಪ್ರಜೆಗಳಿಗೆ, ಕನಾ೯ಟಕದ ಮುಖ್ಯಮಂತ್ರಿಗಳಿಗೆ ಹಾಧಿ೯ಕ ಶುಭಾಶಯಗಳು.! ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಬರೆದಿದ್ದಾರೆ.
ಆರ್‌ಸಿಬಿಯಿಂದಲೂ ವಿಷ್
ನಮ್ಮದೇ ಐಪಿಎಲ್ ತಂಡವಾಗಿರುವ ಆರ್‌ಸಿಬಿಯಲ್ಲಿ ಕನ್ನಡಿಗರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎನ್ನುವುದು ಬಹಳ ದಿನಗಳಿಂದ ಕೇಳಿ ಬರುತ್ತಿರುವ ಮಾತಾಗಿದೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ರಾಜ್ಯೋತ್ಸವಕ್ಕೆ ವಿಷ್ ಮಾಡಿದ್ದು, ಕನ್ನಡಿಗ ಆಟಗಾರರ ಫೋಟೋವನ್ನು ಬಳಸಿ ವಿಷ್ ಮಾಡಿದೆ.
ಕಿಚ್ಚನ ಇಂಗ್ಲಿಷ್ ಶುಭಾಶಯ
ಕಿಚ್ಚ ಸುದೀಪ ಕೂಡ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ್ದು, ಇಂಗ್ಲಿಷ್‌ನಲ್ಲಿ ಕನ್ನಡ ಬರೆದು ಕನ್ನಡಿಗರ ಕುಟುಂಬಕ್ಕೆ ಶುಭ ಕೋರಿದ್ದಾರೆ. ಈ ಬಗ್ಗೆ ಕೆಲವು ಅಭಿಮಾನಿಗಳು ಕಮೆಂಟ್‌ನಲ್ಲಿ ಪ್ರತಿಕ್ರಿಯಿಸಿ ಇದೆಂತಾ ಕನ್ನಡ ಪ್ರೇಮ ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications








