Facebook: ಹೊಸ 'ಅಡುಗೆ ಸ್ಪರ್ಧೆ' ಹಗರಣ! ನಿಮ್ಮ ಫೇಸ್‌ಬುಕ್ ಖಾತೆಗೆ ಕನ್ನ
ಹೊಸ ಹೊಸ ಹಗರಣದ ಪ್ರಕರಣಗಳು ದಿನೇ ದಿನೇ ವರದಿ ಆಗುತ್ತಲೇ ಇರುತ್ತವೆ. ಆದರೆ, ಈಗ ಯಾರೂ ಊಹಿಸದ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಮೂಲಕ ಫೇಸ್‌ಬುಕ್ ( Facebook) ಬಳಕೆದಾರರು ಎಚ್ಚರಿಕೆ ವಹಿಸಬೇಕಾಗಿದೆ.
ಹೌದು, ಫೇಸ್‌ಬುಕ್ ಜಗತ್ತಿನಾದ್ಯಂತ ಹೆಚ್ಚು ಬಳಕೆ ಮಾಡುವ ಪ್ಲಾಟ್‌ಫಾರ್ಮ್ ಆಗಿದ್ದು, ಈ ಮೂಲಕ ಬಳಕೆದಾರರು ಎಲ್ಲಾ ರೀತಿಯ ಮಾಹಿತಿ ಪಡೆಯುತ್ತಾರೆ ಹಾಗೂ ಹಂಚಿಕೊಳ್ಳುತ್ತಾರೆ. ಹಾಗೆಯೇ ಸ್ನೇಹಿತರ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಆದರೆ, ಈಗ ಇದೇ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಮೋಸ ಮಾಡುವ ಹಗರಣ ಜಾಸ್ತಿ ಆಗುತ್ತಿದೆ. ಹಾಗಿದ್ರೆ, ಬನ್ನಿ ಏನಿದು ಹೊಸ ಹಗರಣ?, ಇದರಿಂದ ಎಚ್ಚೆತ್ತುಕೊಳ್ಳುವುದು ಹೇಗೆ ಅನ್ನೋ ಮಾಹಿತಿ ನೋಡೋಣ.

ಫೇಸ್‌ಬುಕ್ ಹಗರಣ: ಕಳೆದ ದಶಕದಲ್ಲಿ ಟೆಕ್ ದೈತ್ಯರು ಈ ರೀತಿಯ ಹಗರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಹೆಚ್ಚು ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಒಂದು ಮಟ್ಟಿಗೆ ಕಡಿಮೆ ಮಾಡುವಲ್ಲಿ ಯಶಸ್ವಿ ಸಹ ಆಗಿದ್ದಾರೆ. ಆದಾಗ್ಯೂ, ವಂಚಕರು ಹೊಸ ಹೊಸ ಮಾರ್ಗದ ಮೂಲಕ ಜನರಿಗೆ ಮೋಸ ಮಾಡಲು ಮುಂದಾಗುತ್ತಲೇ ಇದ್ದಾರೆ. ಅಂತಹ ಒಂದು ಘಟನೆ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಫೇಸ್‌ಬುಕ್ ಬಳಕೆದಾರರಾದ ಆಕಾಂಶಾ ಪಾಂಡೆ ಅವರು ಈ ಸಂಬಂಧ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಪ್ರಕಾರ ವಂಚಕರು ಓರ್ವರ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ಅವರ ಸ್ನೇಹಿತರನ್ನೆಲ್ಲಾ ಮೋಸ ಮಾಡಲು ಮುಂದಾಗುತ್ತಾರೆ. ಅಂದರೆ ಹ್ಯಾಕ್ ಮಾಡಿದ ಪ್ರೊಫೈಲ್‌ನಿಂದ ಅವರ ಸಂಪರ್ಕದಲ್ಲಿರುವ ಖಾತೆಗಳಿಗೆ ಸಂಭಾವ್ಯ ಸಾರ್ವತ್ರಿಕ ಮೆಸೆಜ್ ಅನ್ನು ಕಳುಹಿಸುತ್ತಾರೆ.

ಈ ವೇಳೆ ವಂಚಕರು ಸಂತ್ರಸ್ತರಿಗೆ ಅಡುಗೆ ಸ್ಪರ್ಧೆಯಲ್ಲಿ ಗೆಲ್ಲಲು ಸಹಾಯ ಮಾಡುವ ಕೋಡ್ ಅನ್ನು ಶೇರ್ ಮಾಡಲು ಕೇಳುತ್ತಾರೆ. ಗಮನಿಸಬೇಕಾದ ವಿಷಯ ಏನೆಂದರೆ ಕಳುಹಿಸಲಾಗುವ ಕೋಡ್ ವಾಸ್ತವದಲ್ಲಿ ಫೇಸ್‌ಬುಕ್ ಖಾತೆಯ ಪಾಸ್‌ವರ್ಡ್ ಬದಲಾಯಿಸಬಹುದಾದ ಓಟಿಪಿ (OTP) ಆಗಿರಲಿದೆ. ಕೋಡ್‌ನೊಂದಿಗೆ, ವಂಚಕರು ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಫೇಸ್‌ಬುಕ್ ಖಾತೆಗೆ ಪ್ರವೇಶಿಸುತ್ತಾರೆ ಮತ್ತು ಸ್ನೇಹಿತರ ಪಟ್ಟಿಯಲ್ಲಿರುವ ಇತರ ಬಳಕೆದಾರರನ್ನು ಇದೇ ರೀತಿಯಲ್ಲಿ ವಂಚನೆ ಮಾಡಲು ಮುಂದಾಗುತ್ತಾರೆ.
ಈ ರೀತಿ ಹ್ಯಾಕ್ ಮಾಡಿ ಏನು ತಾನೆ ಮಾಡಲು ಸಾಧ್ಯ ಎಂದು ನೀವು ಕೇಳಬಹುದು. ಆದರೆ ಇದು ಸಾಮಾನ್ಯದ ವಿಚಾರವಲ್ಲ. ಅಂದರೆ ನಿಮ್ಮ ಫೇಸ್‌ಬುಕ್ ಖಾತೆಯಲ್ಲಿ ನಿಮ್ಮ ಶಿಕ್ಷಣ, ವಿಳಾಸ, ಸಂಪರ್ಕಗಳು, ವೈಯಕ್ತಿಕ ಚಿತ್ರಗಳು, ಚಾಟ್‌ಗಳು ಮತ್ತು ಇತರವುಗಳ ಬಗ್ಗೆ ಇರುವ ಮಾಹಿತಿಯನ್ನು ಕದಿಯುವ ಕೆಲಸ ಮಾಡುತ್ತಾರೆ. ಈ ಮಾಹಿತಿಯನ್ನು ಮೋಸದ ಚಟುವಟಿಕೆಗಳಿಗೆ, ಬ್ಲ್ಯಾಕ್‌ಮೇಲ್ ಮಾಡಲು ಮತ್ತು ತಪ್ಪು ಮಾಹಿತಿ ಹರಡಲು ಬಳಕೆ ಮಾಡುತ್ತಾರೆ.
ಈ ರೀತಿಯ ಫೇಸ್ ಬುಕ್ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?: ಇಂತಹ ಫೇಸ್‌ಬುಕ್ ವಂಚನೆಗಳಿಂದ ಸುರಕ್ಷಿತವಾಗಿರಲು ನಿಮ್ಮ ಫೋನ್‌ಗೆ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಇದು ಆನ್‌ಲೈನ್ ಆಗಿರಬಹುದು ಅಥವಾ ಎಸ್‌ಎಮ್‌ಎಸ್ ಆಗಿರಬಹುದು.

ಹಾಗೆಯೇ ಯಾರೋ ಮಾಹಿತಿ ಕೇಳಿದರು ಎಂದ ಮಾತ್ರಕ್ಕೆ ಅವರ ಬಗ್ಗೆ ವಿಚಾರಣೆ ಮಾಡದೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬೇಡಿ. ಅದರಲ್ಲೂ ಓಟಿಪಿ ವಿಚಾರದಲ್ಲಿ ಬಹಳ ಎಚ್ಚರಿಕೆ ಇರಲಿದೆ. ಯಾರೇ ಆದರೂ ಸಹ ನ್ಯಾಯಯುತವಾಗಿ ವ್ಯವಹಾರ ಮಾಡುವವರು ಓಟಿಪಿ ಕೇಳುವುದಿಲ್ಲ ಅನ್ನೋದು ನಿಮ್ಮ ಗಮನಕ್ಕೆ ಇರಲಿ.
ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಲ್ಲಿ ಮಾರ್ಕೆಟ್‌ಪ್ಲೇಸ್ ವಿಭಾಗದಲ್ಲಿ ಹೆಚ್ಚಿನ ಮೋಸ ಮಾಡಲಾಗುತ್ತಿದೆ. ಯಾವುದಾದರೂ ವಸ್ತುಗಳನ್ನು ಖರೀದಿ ಮಾಡುವಾಗ ಆ ಪೋಸ್ಟ್‌ನ ಪೂರ್ವಪರದ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ. ಜೊತೆಗೆ ಯಾವುದೇ ವಸ್ತುವನ್ನು ಖರೀದಿ ಮಾಡುವ ಮುನ್ನವೇ ಯಾರಿಗೂ ಸಹ ಹಣ ನೀಡಬೇಡಿ.


Click it and Unblock the Notifications








