ರಾಜಕೀಯ ಜಾಹೀರಾತುಗಳಿಗೆ ಪಾರದರ್ಶಕತೆ ತರಲು ಫೇಸ್ಬುಕ್ ನಿಂದ ಹೊಸ ಕ್ರಮಗಳು
ಫೇಸ್ಬುಕ್ ನ ಜಾಹೀರಾತು ಸೇವೆಯಲ್ಲಿರುವ ನ್ಯೂನತೆಯನ್ನು ಗುರುತಿಸಿ , ರಾಜಕೀಯ ಜಾಹೀರಾತುಗಳ ಸಮಸ್ಯೆಯ ಮೇಲೆ ಹಿಡಿತ ಸಾಧಿಸಲು ಫೇಸ್ಬುಕ್ ಹೊಸ ಕ್ರಮಗಳನ್ನು ಕೈಗೊಳ್ಳಲಿದೆ
ಕಳೆದ ತಿಂಗಳಷ್ಟೇ ಫೇಸ್ಬುಕ್ ನಕಲಿ ರಶ್ಯನ್ ಪೇಜ್ ಒಂದು ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ಪ್ರಭಾವ ಬೀರುವ ಸಲುವಾಗಿ ಫೇಸ್ಬುಕ್ ನ ಜಾಹೀರಾತು ಸೇವೆಗಳನ್ನು ರಾಜಕೀಯ ಹಿತಾಸಕ್ತಿಯುಳ್ಳ ಪೋಸ್ಟ್ಗಳ ಪ್ರಚಾರಕ್ಕೆ ಬಳಸಿದ್ದನ್ನು ಬಹಿರಂಗ ಪಡಿಸಿತ್ತು. ಈ ಘಟನೆಯಿಂದ ಫೇಸ್ಬುಕ್ ನ ಜಾಹೀರಾತು ಸೇವೆಯಲ್ಲಿದ್ದ ದೊಡ್ಡ ನ್ಯೂನತೆ ಅನಾವರಣಗೊಂಡಿದೆ.

ಈ ಹಿನ್ನಲೆಯಲ್ಲಿ ಫೇಸ್ಬುಕ್ ನ ಸಿಇಓ ಮಾರ್ಕ್ ಜುಕರ್ಬರ್ಗ್ ಅವರು ರಾಜಕೀಯ ಜಾಹೀರಾತಿನ ಸಮಸ್ಯೆಯ ಮೇಲೆ ಹಿಡಿತ ಸಾಧಿಸಲು ಫೇಸ್ಬುಕ್ ಅಳವಡಿಸಲಿರುವ ಹೊಸ ಕ್ರಮಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ. ಇಂತಹ ರಾಜಕೀಯ ಜಾಹೀರಾತುಗಳು ಮತ್ತು ಪುಟಗಳ ಪಾರದರ್ಶಕತೆಯ ಮಟ್ಟ ಹೆಚ್ಚಿಸಲು ಬಯಸಿದ್ದು ಇದಕ್ಕಾಗಿ ಜುಕರ್ಬರ್ಗ್ 3 ವಿಷಯಗಳನ್ನು ಗುರುತಿಸಿದ್ದಾರೆ.
ಈ ನಿಟ್ಟಿನಲ್ಲಿ ಫೇಸ್ಬುಕ್ ತೆಗೆದುಕೊಂಡಿರುವ ಮೊದಲ ಮುಖ್ಯ ನಿರ್ಧಾರವೆಂದರೆ ರಾಜಕೀಯ ಜಾಹೀರಾತು ನೀಡಲಿಚ್ಛಿಸುವವರು ತಮ್ಮ ಗುರುತನ್ನು ಸಾಬೀತುಪಡಿಸಬೇಕಿದ್ದು, ಆ ಜಾಹೀರಾತಿಗೆ ಆರ್ಥಿಕ ಬೆಂಬಲ ನೀಡುತ್ತಿರುವವರ ಗುರತನ್ನು ಕೂಡ ಬಹಿರಂಗಪಡಿಸಬೇಕು. ರಾಜಕೀಯ ಜಾಹಿರಾತುದಾರರು ಪ್ರಕಟಿಸುವ ಎಲ್ಲಾ ಜಾಹೀರಾತುಗಳು 'ಪೊಲಿಟಿಕಲ್' ( ಅಂದರೆ ರಾಜಕೀಯಕ್ಕೆ ಸಂಬಂಧಿಸಿದ್ದು) ಎಂಬ ಲೇಬಲ್ ಹೊಂದಿರಲಿದೆ.
ಎರಡನೆಯದಾಗಿ ಫೇಸ್ಬುಕ್ ಬಳಕೆದಾರರಿಗೆ ಫೇಸ್ಬುಕ್ ಪೇಜ್ ನಲ್ಲಿ ಪ್ರಕಟವಾಗುವ ಎಲ್ಲಾ ಜಾಹೀರಾತುಗಳಿಗೆ ಆಕ್ಸೆಸ್ ದೊರೆಯಲಿದ್ದು, ಆ ಪೇಜ್ನಲ್ಲಿ ಈ ಹಿಂದೆ ಪ್ರಕಟವಾಗಿರುವ ಜಾಹೀರಾತುಗಳ ಆಕ್ಸೆಸ್ ಕೂಡ ದೊರೆಯಲಿದೆ. ಪೇಜ್ನಲ್ಲಿ ಪ್ರಕಟವಾದ ಜಾಹೀರಾತುಗಳು, ಅದಕ್ಕೆ ಆರ್ಥಿಕ ಬೆಂಬಲ ನೀಡುತ್ತಿರುವವರ ವಿವರ, ಜಾಹೀರಾತಿನ ವೀಕ್ಷಕರ ವಿವರ ಇತ್ಯಾದಿ ಎಲ್ಲಾ ಮಾಹಿತಿಗಳನ್ನು ಫೇಸ್ಬುಕ್ ತನ್ನ ಬಳಕೆದಾರರೊಂದಿಗೆ ಹಂಚಿಕೊಳ್ಳಲಿದೆ.
ಮೂರನೆಯದಾಗಿ ಜುಕರ್ಬರ್ಗ್ ಈ ಮೊದಲೇ ತಿಳಿಸಿರುವಂತೆ ರಾಜಕೀಯ ಜಾಹೀರಾತುಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ಹಾಗೂ ಮೆಶೀನ್ ಲರ್ನಿಂಗ್ ಅಲ್ಗೋರಿದಮ್ ಗಳ ಬಳಕೆ ಮಾಡುವುದು. ಈ ಹಿಂದೆ ಜುಕರ್ಬರ್ಗ್ ಭಯೋತ್ಪಾದನೆಗೆ ಸಂಬಂಧಿಸಿದ ಪೋಸ್ಟ್ಗಳನ್ನು ಗುರುತಿಸಲು ಫೇಸ್ಬುಕ್ ಕೃತಕ ಬುದ್ಧಿಮತ್ತೆ ಹಾಗೂ ಮೆಶೀನ್ ಲರ್ನಿಂಗ್ ಬಳಸುವ ಕುರಿತು ತಿಳಿಸಿದ್ದರು.
ಈ ಹಿಂದೆ ಜುಕರ್ಬರ್ಗ್ ಅವರು ಅಮೇರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಮೇಲೆ ಫೇಸ್ಬುಕ್ ಯಾವುದೇ ಪ್ರಭಾವ ಬೀರಿಲ್ಲ ಎಂದು ಹೇಳಿದ್ದರು.


Click it and Unblock the Notifications








