OLXನಲ್ಲಿ ಮರಾಟಕ್ಕಿದೆ ಆಪಲ್ ಐಫೋನ್ X, ಬೆಲೆ ರೂ 150,000!!
ಕಳೆದ ಶುಕ್ರವಾರ ಮಾರುಕಟ್ಟೆಗೆ ಲಗ್ಗೆ ಇಟ್ಟ ಆಪಲ್ ಐಫೋನ್ X ಗೆ ಭಾರೀ ಬೇಡಿಕೆ ಉಂಟಾಗಿದೆ. ಆಪಲ್ ಐಫೋನ್ ನ ಕಟ್ಟಾ ಆಭಿಮಾನಿಗಳು ಆಪಲ್ ಐಫೋನ್ X ಖರೀದಿಸುವ ಸಲುವಾಗಿ ಜಗತ್ತಿನಾದ್ಯಂತ ಆಪಲ್ ಸ್ಟೋರ್ಗಳ ಮುಂದೆ ಉದ್ದ ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ.ಆಪಲ್ ಐಫೋನ್ X ಐಫೋನ್ ನ 10ನೇ ವಾರ್ಷಿಕೋತ್ಸವದ ಆವೃತ್ತಿಯಾಗಿದ್ದು, ಇದನ್ನು ತಮ್ಮದಾಗಿಸಿಕೊಳ್ಳಲು ಜನ ನಾಮುಂದು ತಾಮುಂದು ಎಂದು ಮುಗಿಬೀಳುತ್ತಿದ್ದಾರೆ.

ಭಾರತದಲ್ಲೂ ಶುಕ್ರವಾರ ಬಿಡುಗಡೆಯಾದ ಐಫೋನ್ X ಆಪಲ್ ಸ್ಟೋರ್ ಮತ್ತು ಏರ್ಟೆಲ್ ಆನ್ಲೈನ್ ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯವಿದೆ. ಆನ್ಲೈನ್ ನಲ್ಲಿ ಲಭ್ಯವಾದ ಕೆಲವೇ ನಿಮಿಷಗಳಲ್ಲಿ ಐಫೋನ್ X ಏರ್ಟೆಲ್ ಆನ್ಲೈನ್ ಸ್ಟೋರ್ನಲ್ಲಿ ಔಟ್ ಆಫ್ ಸ್ಟಾಕ್ ಆಗಿದೆಯಂತೆ.ಇದುವರೆಗೆ ಆಪಲ್ ಬಿಡುಗಡೆ ಮಾಡಿರುವ ಐಫೋನ್ಗಳ ಪೈಕಿ ಐಫೋನ್ X ಅತ್ಯಂತ ದುಬಾರಿಯಾಗಿದ್ದು ರೂ 89,000 ಮತ್ತು ರೂ 102,000 ಬೆಲೆಯ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಇಷ್ಟು ದುಬಾರಿಯಾದರೂ ಆಪಲ್ ಐಫೋನ್ X ನ ಬೇಡಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ.ಭಾರತದಲ್ಲಿ ಐಫೋನ್ X ನಿಯಮಿತ ಸ್ಟಾಕ್ನಲ್ಲಿ ಲಭ್ಯವಿರುವುದು ಬಹಳಷ್ಟು ಐಫೋನ್ X ಆಕಾಂಕ್ಷಿಗಳಿಗೆ ನಿರಾಸೆಯುಂಟುಮಾಡಿದೆ.
ಈಗಾಗಲೇ ಐಫೋನ್ X ಖರೀದಿಸುವಲ್ಲಿ ಯಶಸ್ವಿಯಾಗಿರುವ ಕೆಲವರು ಈ ಸಂದರ್ಭದ ಲಾಭ ಪಡೆಯುತ್ತಿದ್ದಾರೆ. ಕೆಲವರು ತಮ್ಮ ಐಫೋನ್ X ಅನ್ನು OLX ನಲ್ಲಿ ಮಾರಾಟಮಾಡಲು ಮುಂದಾಗಿದ್ದು,256GB ಸ್ಟೋರೇಜ್ ಸಾಮರ್ಥ್ಯವುಳ್ಳ ಅನ್ಲಾಕ್ಡ್ ಮಾಡೆಲ್ ನ ಬೆಲೆ ರೂ 150,000 ನಿಗದಿಪಡಿಸಿದ್ದಾರೆ. ಐಫೋನ್ X ನ ನಿಜವಾದ ಬೆಲೆ ರೂ 102,000 ಗೆ ಹೋಲಿಸಿದರೆ ಈ ಬೆಲೆ ಭಾರೀ ದುಬಾರಿಯೇ ಸರಿ!
ಆನ್ಲೈನ್ ಮಾರಾಟದ ಪೋರ್ಟಲ್ ಆಗಿರುವ OLX ನಲ್ಲಿ ಸಮಾರು 330 ಮಂದಿ ದುಬಾರಿ ಬೆಲೆಗೆ ತಮ್ಮ ಐಫೋನ್ X ಮಾರಾಟಮಾಡಲು ಮುಂದಾಗಿದ್ದಾರೆ. ಈ ಮಂದಿ ಅಧಿಕ ಬೆಲೆಗೆ ಮಾರಾಟಮಾಡುವ ಸಲುವಾಗಿಯೇ ಮೊದಲ ದಿನವೇ ಐಫೋನ್ X ಖರೀದಿಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಪೈಕಿ ಹಲವರು ಭಾರತದಲ್ಲಿಯೇ ಐಫೋನ್ X ಖರೀದಿಸಿದ್ದು ಆ ಮೊಬೈಲ್ಗಳು ಸ್ಥಳೀಯ ವಾರೆಂಟಿಯನ್ನು ಹೊಂದಿವೆ.
OLX ವೆಬ್ಸೈಟ್ನಲ್ಲಿ ಲಭ್ಯವಿರುವ ಜಾಹೀರಾತುಗಳ ಪೈಕಿ ಐಫೋನ್ X ನ ಬೆಲೆ ರೂ 115,000 ರಿಂದ ಹಿಡಿದು ರೂ 150,000 ರ ವರೆಗೆ ಇದೆ. ಒಬ್ಬನಂತೂ 64GB ಮತ್ತು 256 GB ಯ ಎರಡು ಆವೃತ್ತಿಗಳನ್ನೂ ರೂ 115,000 ಮತ್ತು ರೂ 135,000 ಬೆಲೆಗೆ ಮಾರಾಟಕಿಟ್ಟಿದ್ದಾನೆ!
ಇಂತಹ ದೃಷ್ಟಾಂತಗಳು ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಆಪಲ್ ನ ಹೊಸ ಉತ್ಪನ್ನಗಳು ಬಿಡುಗಡೆಯಾದಾಗಲೆಲ್ಲಾ ಹಲವಾರು ಮಂದಿ OLX ನಂತಹ ಆನ್ಲೈನ್ ಮಾರಾಟದ ಪೋರ್ಟಲ್ಗಳಲ್ಲಿ ಅದನ್ನು ಅಧಿಕ ಬೆಲೆಗೆ ಮಾರಾಟಮಾಡುವುದನ್ನು ಈ ಮೊದಲೇ ನೋಡಿದ್ದೇವೆ.
ಐಫೋನ್ X ಮೊದಲ ದಿನವೇ ಔಟ್ ಆಫ್ ಸ್ಟಾಕ್ ಆದ ಕಾರಣ ಅದರ ನಿಜವಾದ ಬೆಲೆಗಿಂತ ದುಬಾರಿ ಬೆಲೆಗೆ OLX ನಲ್ಲಿ ಮಾರಾಟ ಮಾಡಲು ಹಲವರು ಮುಂದಾಗಿದ್ದಾರೆ.ಹಲವರು ರಿಲಯೆನ್ಸ್ ಜಿಯೋಫೋನ್ ಅನ್ನು ಕೂಡ OLX ನಲ್ಲಿ ಮಾರಾಟಮಾಟಲು ಮುಂದಾಗಿದ್ದು, ಇದು ರಿಲಯೆನ್ಸ್ ನ ನಿಯಮಗಳು ಮತ್ತು ಷರತ್ತುಗಳ ವಿರುದ್ಧವಾಗಿದೆ.


Click it and Unblock the Notifications








