ಮೊಬೈಲ್ ನಲ್ಲೇ ಫಿಲಂ ಚಿತ್ರಿಸಿದ ದಾಖಲೆ ಹುಡುಗ

By Super
|
ಮೊಬೈಲ್ ನಲ್ಲೇ ಫಿಲಂ ಚಿತ್ರಿಸಿದ ದಾಖಲೆ ಹುಡುಗ

ನಾವು ದಿನನಿತ್ಯ ಉಪಯೋಗಿಸುವ ಮೊಬೈಲ್ನಲ್ಲಿ ಎಷ್ಟೆಲ್ಲಾ ವೈಶಿಷ್ಟ್ಯಗಳು ಇದ್ದರೂ ಎಲ್ಲೋ ಕೆಲವನ್ನು ಮಾತ್ರ ಉಪಯೋಗಿಸುತ್ತೇವೆ. ಸಾಧಾರಣವಾಗಿ ಕರೆಗಳು, ಸಂದೇಶಗಳಿಗಾಗಿ ಇಲ್ಲವೆ ನಮ್ಮ ಖಾಸಗಿ ಚಿತ್ರಗಳನ್ನು ತೆಗೆಯಲು ಉಪಯೋಗಿಸುತ್ತೇವೆ. ಆದರೆ ನಮ್ಮ ಬೆಂಗಳೂರಿನ ಹುಡುಗನೊಬ್ಬ ಸ್ಟಾಪ್-ಮೋಶನ್ ಸಾಕ್ಷ್ಯಚಿತ್ರ ಮಾಡಿ ಭಾರತೀಯ ದಾಖಲೆ ಬರೆದಿದ್ದಾನೆ.

ಹೌದು. ಶ್ರವಣ್ ರಿಗ್ರೆಟ್ ಅಯ್ಯರ್ ಹೆಸರಿನ 21 ವರ್ಷದ ಪತ್ರಿಕೋದ್ಯಮದ ವಿದ್ಯಾರ್ಥಿಯೇ ಆ ಭಾರತೀಯ ದಾಖಲೆ ಸೃಷ್ಟಿಸಿರುವ ಹುಡುಗ. ಚಿಕ್ಕಂದಿನಿಂದಲೇ ಜಗತ್ತನ್ನು ಬೆರಗು ಗಣ್ಣಿನಿಂದ ನೋಡುತ್ತಾ, ವಿಭಿನ್ನ ದೃಷ್ಟಿಕೋನದಲ್ಲಿ ಯೋಚಿಸುವ ಹವ್ಯಾಸ ಬೆಳೆಸಿಕೊಂಡು ಚಿತ್ರಗಳನ್ನು ತೆಗೆಯುತ್ತಿದ್ದ ಶ್ರವಣನಿಗೆ ಆ ಫೋಟೋಗ್ರಫಿ ಹವ್ಯಾಸವೇ "ಸ್ಟಾಪ್-ಮೋಶನ್"ಸಾಕ್ಷ್ಯಚಿತ್ರ ತೆಗೆಯಲು ಪ್ರೇರಣೆ ನೀಡಿತಂತೆ.

ತಂದೆಯ ಜೊತೆ ಚಿಕ್ಕಂದಿನಿಂದಲೂ ಶ್ರೀರಂಗಪಟ್ಟಣದ ಹತ್ತಿರ ಇರುವ ಗಂಜಾಂ ಎಂಬ ಸ್ಥಳದ ಜೊತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದ ಶ್ರವಣ್, ತಾನು ಯಾಕೆ ಅದರ ಚರಿತ್ರೆಯ ಬಗ್ಗೆ ಹೇಳಬಾರದು, ಅದೂ ವಿಭಿನ್ನವಾಗಿ ಎಂಬ ಆಲೋಚನೆ ಬಂದೊಡನೆ ತನ್ನ ಗೆಳೆಯರಾದ ವಿನಯ್ ಹಾಗು ಶ್ರುತಿ ಜೊತೆ ಸೇರಿ ಸುಮಾರು 14 ಗಂಟೆ ಸತತವಾಗಿ ನಿಕೊನ್ D60 ಕ್ಯಾಮರಾ ಬಳಸಿ ಫೋಟೋ ತೆಗೆದು, ವೀಡಿಯೊ ಮಾದರಿಯಲ್ಲಿ ಕಾಣುವಂತೆ ಸಂಕಲನ ಮಾಡಿ "Stop Motion" ಸಾಕ್ಷ್ಯಚಿತ್ರ - "ಗಂಜಾಂ- ಏ ಟ್ರೆಶರ್ ಐಲ್" ತೆಗೆದು ಭಾರತೀಯ ದಾಖಲೆ ಸೃಷ್ಟಿಸಿದ್ದಾನೆ.

ಇದಾದ ನಂತರ ನೋಕಿಯಾ- N8 ಮೊಬೈಲ್ ಬಳಸಿ ತೆಗೆದ ಮತ್ತೊಂದು ಸಾಕ್ಷ್ಯ ಚಿತ್ರ - "ರೆಕ್ಕೆ ಮುರಿದ ಹಕ್ಕಿ ನಾನು". ಕಾಲೇಜಿಗೆ ಹೋಗುತ್ತಿದ್ದಾಗ ಮೆಜೆಸ್ಟಿಕ್ ರಸ್ತೆಯಲ್ಲಿ ರೆಕ್ಕೆ ಮುರಿದ ಕಾಗೆಯೊಂದು ಹಾರಲಾರದೆ ರಸ್ತೆ ದಾಟುತ್ತಿದ್ದನ್ನು ನೋಡಿ, ಮನುಷ್ಯರ ದುರಾಸೆಯಿಂದ ಹೇಗೆ ಪರಿಸರ ಮಾಲಿನ್ಯವಾಗುತ್ತಿದೆ ಎಂಬ ಸಂದೇಶ ಸಾರುವ ಸಾಕ್ಷ್ಯ ಚಿತ್ರ ಮಾಡಬೇಕೆನಿಸಿ ತೆಗೆದದ್ದು. ಒಂದೇ ದಿನದಲ್ಲಿ ಚಿತ್ರೀಕರಿಸಿ ಮಾಡಿದ ಈ 5 ನಿಮಿಷದ ಚಿತ್ರ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ ದಿನದಿಂದ ಬಹಳ ಮೆಚ್ಚುಗೆ ಗಳಿಸಿದೆ.

ಮೊಬೈಲ್ ಬಳಸಿ ಚಿತ್ರೀಕರಿಸಿರುವ ಈತನ ಇತರ ಸಾಕ್ಷ್ಯ ಚಿತ್ರಗಳು (ಮೊಬಿಸೋಡ್).

  • "ಗಾಂಧಿ ಸಬರ್ಮತಿ ಆಶ್ರಮ"- ಗಾಂಧೀಜಿಯ ಆಶ್ರಮದ ಸದ್ಯದ ಪರಿಸ್ಥಿತಿ ಕುರಿತ ಸಾಕ್ಷ್ಯಚಿತ್ರ.

  • "ಕೊಡುಗೋಲು ಶಾಪ " - ಬಿಳಿಗಿರಿ ರಂಗನ ಬೆಟ್ಟದ ಸೋಲಿಗ ಬುಡಕಟ್ಟು ಜನಾಂಗಕ್ಕೆ ಶಾಪವಾಗಿರುವ ಅನುವಂಶಿಕ ರೋಗ ಸಿಕಲ್ ಸೆಲ್ ಅನೆಮಿಯ ಬಗೆಗಿನ ಕಿರು ಸಾಕ್ಷ್ಯಚಿತ್ರ.

  • “ವ್ಯಾನಿಶಿಂಗ್ ವಾಯ್ಸ್ ”- ರಸ್ತೆಯಲ್ಲಿ ತರಕಾರಿ ಮಾರುವವರ ಬಗೆಗಿನ ಸಾಕ್ಷ್ಯಚಿತ್ರ. ಈ ಸಾಕ್ಷ್ಯ ಚಿತ್ರಕ್ಕೆ ಮಣಿಪಾಲ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಜರ್ನಲಿಸಂ (ಬ್ರಾಡ್ಕಾಸ್ಟ್) ಪ್ರಶಸ್ತಿ ಕೂಡ ಲಭಿಸಿದೆ.

ಈ ಹುಡುಗನ ಸಾಹಸಕ್ಕೆ ಬೆನ್ನೆಲುಬಾಗಿ ನಿಂತಿರುವುದು ಅವನ ತಂದೆ ರಿಗ್ರೆಟ್ ಅಯ್ಯರ್, ತಮ್ಮ ರಿಗ್ರೆಟ್ ಅಯ್ಯರ್ ಪ್ರೊಡಕ್ಷನ್ಸ್ ಮೂಲಕ.

ಆತನ ಸಾಕ್ಷ್ಯಚಿತ್ರ ಗಳನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ-http://www.youtube.com/user/RegretIyerProduction

*ವರುಣ್ ಆದಿತ್ಯ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X