ಟಿಕ್ಟಾಕ್ ವೀಡಿಯೋ ಮಾಡಲು ಸ್ನೇಹಿತನನ್ನೇ ಕೊಂದಿದ್ದು ನಿಜ!!
ದೆಹಲಿಯಲ್ಲಿ ಟಿಕ್ಟಾಕ್ ವೀಡಿಯೋ ಮಾಡಲು ಹೋಗಿ ಯುವಕನೊಬ್ಬ ತನ್ನ 19 ವರ್ಷದ ಸ್ನೇಹಿತನನ್ನೇ ಶೂಟ್ ಮಾಡಿ ಕೊಂದಿದ್ದಾನೆ ಎಂಬುದು ಬಹುತೇಕ ನಿಜ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ. ಮೃತ ಸಲ್ಮಾನ್ ಎಂಬ ಯುವಕನ ತಲೆಗೆ ಗುರಿ ಇಟ್ಟು ಟಿಕ್ಟಾಕ್ ವೀಡಿಯೋ ಮಾಡಲು ಮುಂದಾದಾಗ ಇಂತಹ ದುಘಟನೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಹೌದು, ಮೃತ ಸಲ್ಮಾನ್ ತನ್ನ ಸ್ನೇಹಿತರೊಂದಿಗೆ ಔಟಿಂಗ್ ಹೋಗಿದ್ದ. ಎಲ್ಲರೂ ದೆಹಲಿಯ ಗೇಟ್ ವೆ ಆಫ್ ಇಂಡಿಯಾ ಬಳಿ ಫೋಟೊ ಶೂಟ್ ಮಾಡಿಕೊಂಡು ಅಲ್ಲಿಂದ ವಾಪಸ್ ಬರುತ್ತಿದ್ದರು. ನಂತರ ಸಲ್ಮಾನ್ ಕಾರು ಓಡಿಸುತ್ತಿದ್ದ ಸಮಯದಲ್ಲಿ ಸೊಹೆಲ್ ಎಂಬುವವನು ಜೇಬಿನಿಂದ ಪಿಸ್ತೂಲ್ ತೆಗೆದು ಆತನ ತಲೆಗೆ ಗುರಿ ಇಟ್ಟು ವೀಡಿಯೋ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.

ಈ ವೇಳೆಯಲ್ಲಿ ಅಚಾನಕ್ ಆಗಿ ಸೊಹೆಲ್ ಹಿಡಿದಿದ್ದ ಕಂಟ್ರಿ ಪಿಸ್ತೂಲ್ನಿಂದ ಬುಲೆಟ್ ಫೈರ್ ಆಗಿದ್ದು, ಗುಂಡಿನ ಗಟ್ಟಿ ಏಟಿಗೆ ಕಾರನ್ನು ಓಡಿಸುತ್ತಿದ್ದ ಸಲ್ಮಾನ್ ಎಡ ಭಾಗದ ಕೆನ್ನೆಗೆ ಶೂಟ್ ಆಗಿ ಛಿದ್ರವಾಗಿದೆ. ನಂತರ ಕಡುರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಸಲ್ಮಾನ್ನನ್ನು ಸಮೀಪದ ಆಸ್ಪತ್ರೆಗೆ ಅವರೇ ಕರೆದೊಯ್ಯುಲಾಗಿದೆಯಾದರೂ ಆ ವೇಳೆಗಾಗಲೇ ಸಲ್ಮಾನ್ ಸಾವನ್ನಪ್ಪಿದ್ದಾನೆ.
ಇನ್ನು ಹತ್ಯೆ ಹಾಗೂ ಹತ್ಯೆಗೆ ಸಹಾಯ ಮಾಡಿದ ಆರೋಪದ ಮೇಲೆ ಸೊಹೆಲ್, ಅಮೀರ್ ಹಾಗೂ ಶರಿಫ್ ಎಂಬುವವರನ್ನು ದೆಹಲಿಯ ಬರಖಂಬಾ ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಇದು ಆಕಸ್ಮಿಕ ಎಂದು ಹೇಳಲಾಗಿದೆಯಾದರೂ,ಈ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿದೆಯೇ ಅಥವಾ ಆಕಸ್ಮಿಕವಾಗಿ ನಡೆದಿದೆಯೇ ಎಂಬುದು ತನಿಖೆ ನಂತರವಷ್ಟೇ ಬಹಿರಂಗವಾಗಲಿದೆ.

ಟಿಕ್ ಟಾಕ್ ಮಾಡುವುದು ಇವತ್ತಿನ ಜನಮಾನದಲ್ಲಿ ಫ್ಯಾಶನ್ ಆಗಿಬಿಟ್ಟಿದ್ದು, ದೊಡ್ಡವರಿಂದ ಚಿಕ್ಕವರ ವರೆಗೆ ಎಲ್ಲರೂ ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದಾರೆ. ಮಕ್ಕಳು ಹಾಗೂ ಯುವ ಸಮೂಹಕ್ಕೆ ಈ ಟಿಕ್ ಟಾಕ್ ಒಂದು ರೀತಿಯ ಚಟವಾಗಿಬಿಟ್ಟಿದೆ. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಟಿಕ್ ಟಾಕ್ ಬ್ಯಾನ್ ಮಾಡುವಂತೆ ಕೋರ್ಟ್ ಮೆಟ್ಟಿಲೇರಿರುವುದು ಮತ್ತೆ ಮುನ್ನೆಲೆಗೆ ಬಂದಿದೆ.
ಓದಿರಿ: ನೀವು PF ಖಾತೆಯನ್ನು ಹೊಂದಿದ್ದರೆ ಶೀಘ್ರವೇ ಈ ಕೆಲಸ ಮಾಡಿ!


Click it and Unblock the Notifications








