ಗೂಗಲ್ ಒಪ್ಪಂದದಿಂದ ಹಿಂದೆ ಸರಿದ ಚುನಾವಣಾ ಆಯೋಗ

Posted By:

ದೇಶದ ಸುರಕ್ಷತೆ ಮತ್ತು ಭದ್ರತೆಯ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಮಾಹಿತಿ ನೀಡುವ ಗೂಗಲ್‌‌ ಜೊತೆಗೆ ಮಾಡಬೇಕೆಂದಿದ್ದ ಒಪ್ಪಂದವನ್ನು ಕೇಂದ್ರ ಚುನಾವಣಾ ಆಯೋಗ ಕೈಬಿಟ್ಟಿದೆ.

ದೇಶದ ಪ್ರಮುಖ ರಾಜಕೀಯ ಪಕ್ಷಗಳು,ಸೈಬರ್‌ ತಜ್ಞರು ಗೂಗಲ್‌ ಜತೆಗಿನ ಒಪ್ಪಂದದ ಕುರಿತು ಸಂದೇಹ ವ್ಯಕ್ತ ಪಡಿಸಿದ ಕಾರಣ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಎಸ್ಎ) ಮಾಜಿ ಗುತ್ತಿಗೆದಾರ ಎಡ್ವರ್ಡ್ ಸ್ನೋಡೆನ್ ಈ ಹಿಂದೆ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳ ಮಾಹಿತಿಯನ್ನು ಕದಿಯುತ್ತಿದೆ ಎಂದು ಆಧಾರ ಸಮೇತ ಬಹಿರಂಗ ಪಡಿಸಿದ್ದ.ಹೀಗಾಗಿ ಒಂದು ದೇಶದ ಎಲ್ಲಾ ಜನರ ಮಾಹಿತಿ ಇರುವ ದತ್ತಾಂಶಗಳನ್ನು ಅಮೆರಿಕದಲ್ಲಿ ಸರ್ವರ್‌ ಹೊಂದಿರುವ ಕಂಪೆನಿಗೆ ನೀಡಿದರೆ ಅಮೆರಿಕಕ್ಕೆ ಸುಲಭವಾಗಿ ನಮ್ಮ ಮಾಹಿತಿ ನೀಡಿದಂತಾಗುತ್ತದೆ. ದೇಶದ ಭದ್ರತೆ ದೃಷ್ಟಿಯಿಂದ ಇದು ಸಮ್ಮತವಲ್ಲ ಎಂದು ರಾಜಕೀಯ ಪಕ್ಷಗಳು ಮತ್ತು ಸೈಬರ್‌ ತಜ್ಞರು ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದರು.

ಗೂಗಲ್ ಒಪ್ಪಂದದಿಂದ ಹಿಂದೆ ಸರಿದ ಚುನಾವಣಾ ಆಯೋಗ

ಯೋಜನೆಗೆ ಸಾರ್ವ‌ಜನಿಕ ವಲಯದಲ್ಲಿ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಜನವರಿ 9 ಗುರುವಾರ ಸಭೆ ಕರೆದು ಕೊನೆಗೆ ಗೂಗಲ್‌ ಜೊತೆಗಿನ ಒಪ್ಪಂದವನ್ನು ಕೈಬಿಡುವ ತೀರ್ಮಾನಕ್ಕೆ ಬಂದಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಮತದಾರರ ಪಟ್ಟಿ,ಮಾಹಿತಿಗಳನ್ನು ಜನರು ಸುಲಭವಾಗಿ ವೀಕ್ಷಿಸುವ ಸೇವೆ ನೀಡುವ ಪ್ರಸ್ತಾಪವನ್ನು ಗೂಗಲ್‌ ಚುನಾವಣಾ ಆಯೋಗದ ಮುಂದಿಟ್ಟಿತ್ತು. ಜೊತೆಗೆ ಆಯೋಗ ನೀಡುವ ದಾಖಲೆಗಳನ್ನು ಎಲ್ಲಿಯೂ ಬಹಿರಂಗ ಮಾಡುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಭರವಸೆ ನೀಡಿತ್ತು.

ಈ ಪ್ರಸ್ತಾಪವನ್ನು ಆಯೋಗ ಒಪ್ಪಿದಲ್ಲಿ ಜನವರಿ ಎರಡನೇ ವಾರದಿಂದ ಈ ಸೇವೆಯನ್ನು ಆರಂಭಿಸುವುದಾಗಿ ಗೂಗಲ್‌ ಹೇಳಿತ್ತು.ಜನವರಿ ಎರಡನೇ ವಾರದಿಂದ ಆರಂಭವಾದ ಈ ಸೇವೆ ಮುಂದಿನ ಆರು ತಿಂಗಳ ಕಾಲ ಹೊಸ ಸರ್ಕಾರ ಸ್ಥಾಪನೆಯಾಗುವ ವರೆಗೂ ಗೂಗಲ್‌ ಉಚಿತವಾಗಿ ನೀಡುವುದಾಗಿ ಪ್ರಕಟಿಸಿತ್ತು. ಚುನಾವಣಾ ಆಯೋಗ ಇದುವರೆಗೂ ಗೂಗಲ್‌ಗೆ ಯಾವುದೇ ಅಂಕಿ ಅಂಶದ ಮಾಹಿತಿಯನ್ನು ಹಸ್ತಾಂತರಿಸಿಲ್ಲ.


ಇದನ್ನೂ ಓದಿ: ಗೂಗಲ್‌ನಲ್ಲಿ ಎಲ್ಲಾ ಸಿಗುತ್ತೆ ಅಂತ ಏನೇನು ಹುಡಕಬೇಡಿ!

ಇದನ್ನೂ ಓದಿ: ಚುನಾವಣಾ ಮಾಹಿತಿ,ಸುದ್ದಿಗಾಗಿ ಗೂಗಲ್‌ನಿಂದ ವಿಶೇಷ ವೆಬ್‌ಸೈಟ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot