ಹುವಾವೇಯಿಂದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಹ್ಯಾಕ್‌

Posted By:

ಚೀನಾ ಮೂಲದ ಹುವಾವೇ ಕಂಪೆನಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ನ್ನು ಹ್ಯಾಕ್‌‌ ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.ಸರ್ಕಾರ ಹುವಾವೇ ಹ್ಯಾಕಿಂಗ್‌ ಬಗ್ಗೆ ಎಚ್ಚೆತ್ತಿದ್ದು ತನಿಖೆ ಆರಂಭಿಸಿದೆ.

ಸಂಸತ್‌‌ ಅಧಿವೇಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ ಐಟಿ ಖಾತೆ ರಾಜ್ಯ ಸಚಿವೆ ಕಿಲ್ಲಿ ಕೃಪಾರಾಣಿ ಈ ಬಗ್ಗೆ ತನಿಖೆ ನಡೆಸಲು ಅಂತಾರಾಷ್ಟ್ರೀಯ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಆಂಧ್ರಪ್ರದೇಶದ ಕರಾವಳಿ ಪ್ರದೇಶದ ಕೆಲ ಮೊಬೈಲ್‌ ಟವರ್‌ಗಳಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ಈ ಸಮಸ್ಯೆಗೆ ಚೀನಾ ಕಂಪೆನಿಯ ಹ್ಯಾಕಿಂಗ್‌ ಕಾರಣ ಎಂದು ಕೃಪಾರಾಣಿ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್‌ 2012ರಲ್ಲಿ ತನ್ನ ನೆಟ್‌ವರ್ಕ್ ವಿಸ್ತರಣೆ ಸಲುವಾಗಿ ಕರೆದಿದ್ದ 10.15 ದಶಲಕ್ಷ ಲೈನ್‌ಗಳ ಟೆಂಡರ್‌ನಲ್ಲಿ ಬಹುಪಾಲನ್ನು ಚೀನಾದ ಜಡ್‌ಟಿಇ ಕಂಪೆನಿಗೆ ನೀಡಿತ್ತು.ಚೀನಾದ ಟೆಲಿಕಾಂ ಸಾಧನಗಳ ಉತ್ಪಾದಕ ಹುವಾವೇ ಟೆಂಡರ್‌ನಲ್ಲಿ ಭಾಗವಹಿಸಿದ್ದರೂ ಕಡಿಮೆ ದರದಲ್ಲಿ ಸಲಕರಣೆಗಳನ್ನು ವಿತರಣೆ ಮಾಡುವುದಕ್ಕೆ ನಿರಾಕರಿಸಿತ್ತು.

ಹುವಾವೇಯ ಹ್ಯಾಕಿಂಗ್‌ ಬಗ್ಗೆ ಸಚಿವೆ ಕೃಪರಾಣಿ ಲಿಖಿತ ಉತ್ತರ ನೀಡಿದ್ದು, ಈ ಸಂಬಂಧ ಹೆಚ್ಚಿನ ವಿವರವನ್ನು ನೀಡಿಲ್ಲ.

ಹುವಾವೇಯಿಂದ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಹ್ಯಾಕ್‌

2012ರಲ್ಲಿ ಅಮೆರಿಕ ಚೀನಾ ಟೆಲಿಕಾಂ ಕಂಪೆನಿಗಳು ಸೈಬರ್‌ ದಾಳಿ ಮಾಡುವ ಸಾಧ್ಯತೆಯಿದ್ದು ಝಡ್‌ಟಿಇ ಮತ್ತು ಹುವಾವೇ ಬದಲಾಗಿ ಬೇರೆ ಕಂಪೆನಿಗಳ ಜೊತೆ ವ್ಯವಹಾರ ಮಾಡಿ ಎಂದು ತನ್ನ ಕಂಪೆನಿಗಳಿಗೆ ಎಚ್ಚರಿಕೆ ನೀಡಿತ್ತು.

ಅಮೆರಿಕ ತನ್ನ ಕಂಪೆನಿಗಳಿಗೆ ಈ ಎಚ್ಚರಿಕೆ ನೀಡಿದ ಬಳಿಕ ಸಂಸದೀಯ ಸಮಿತಿ 2012ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿ, ಕಂಪೆನಿಗಳು ವಿತರಿಸುವ ಟೆಲಿಕಾಂ ಉಪಕರಣಗಳ ಭದ್ರತೆ ಬಗ್ಗೆ ಪರಿಶೀಲಿಸಿ ಅನುಮತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಜೊತೆಗೆಅಮೆರಿಕದಲ್ಲಿ ಇರುವಂತಹ ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿತ್ತು.

ಸರ್ಕಾರ ಹೇಳಿಕೆಗೆ ಹುವಾವೇ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಶ್ವದ ಹೆಚ್ಚಿನ ಹಾರ್ಡ್‌ವೇರ್‌‌ ಉತ್ಪನ್ನಗಳು ಚೀನಾದಲ್ಲೇ ತಯಾರಾಗುತ್ತಿದ್ದು ಭಾರತೀಯ ಕಂಪೆನಿಗಳಿಗೆ ಚೀನಾದ ಕಂಪೆನಿಗಳು ಹೆಚ್ಚು ಹಾರ್ಡ್‌ವೇರ್‌ ವಸ್ತುಗಳನ್ನು ವಿತರಣೆ ಮಾಡುತ್ತಿವೆ.

ಇದನ್ನೂ ಓದಿ:ಇಂಟರ್‌ನೆಟ್‌ನಲ್ಲಿ ಎಲ್ಲಾ ಸಿಗುತ್ತೆ ಅಂತ ಏನೇನು ಹುಡಕಬೇಡಿ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot