ಚಾನ್ಸ್ ಮಿಸ್ ಮಾಡಿಕೊಂಡು ಕೈ ಕೈ ಹಿಸುಕಿಕೊಂಡ ಬಿಗ್ ಟೆಕ್ ಕಂಪನಿಗಳು
ಟೆಕ್ ಲೋಕದಲ್ಲಿ ಜನರಿಗೆ ದಿನಕ್ಕೊಂದು ವಿಶಿಷ್ಟ ಅಂಶಗಳನ್ನು ನೀಡುತ್ತಾ ಬಂದಿರುವ ಟೆಕ್ ಕಂಪನಿಗಳು ತಾವು ಸಹ ಮಣ್ಣು ಮುಕ್ಕಿದ ಉದಾಹರಣೆಗಳಿವೆ. ಮನೆಗೆ ಬಂದ ಭಾಗ್ಯಲಕ್ಷ್ಮೀಯನ್ನು ಕಾಲಿನಿಂದ ಒದೆಯುವ ಕೆಲಸವನ್ನು ಮಾಡಿದ ಈ ಕಂಪನಿಗಳು ಕೈ ಕೈ ಹಿಸುಕಿಕೊಂಡಿವೆ.

ಹೌದು, ಅಂದು ಟೆಕ್ ಕಂಪನಿಗಳಿಗೆ ಬಂದಿದ್ದ ಬಿಗ್ ಡೀಲ್ ಆಫರ್‌ಗಳನ್ನು ಬೇಡ ಎಂದು ದೂರ ತಳ್ಳಿ ಪ್ರಸ್ತುತ ತಾವುಗಳೇ ಟೆಕ್ ಲೋಕದಲ್ಲಿ ಅವನತಿಯತ್ತಿರ ಸಾಗಿವೆ. ತಿರಸ್ಕೃತ ಕಂಪನಿಗಳು ಪ್ರಸ್ತುತ ದೊಡ್ಡದಾಗಿ ಬೆಳೆದು ಟೆಕ್ ಜಗತ್ತಿನಲ್ಲಿ ಬಿಗ್ ಹೆಸರನ್ನು ಪಡೆದಿವೆ. ಇಂತಹ ಇತಿಹಾಸದ ದೊಡ್ಡ ತಪ್ಪುಗಳ ಮೇಲಿನ ಒಂದು ಇಣುಕು ನೋಟ ಇಲ್ಲಿದೆ.

1. ಮಾರ್ವೆಲ್ ಸಿನಿಮಾ ಹಕ್ಕುಗಳನ್ನು ತಿರಸ್ಕರಿಸಿದ್ದ ಸೋನಿ
ಎರಡು ದಶಕದ ಹಿಂದೆ ಸೋನಿ ಮಾರ್ವೆಲ್ ಸಿನಿಮಾ ಹಕ್ಕುಗಳನ್ನು ತಿರಸ್ಕರಿಸಿತ್ತು. ಆಗ ತಾನೇ ಬೆಳೆಯುತ್ತಿದ್ದ ಮಾರ್ವೆಲ್ ನಿರ್ಮಾಣ ಕಂಪನಿ ಹಣದ ಸಮಸ್ಯೆಯಿಂದ ಎಲ್ಲಾ ಮಾರ್ವೆಲ್ ಸಿನಿಮಾಗಳ ಹಕ್ಕುಗಳನ್ನು ತೆಗೆದುಕೊಳ್ಳಬೇಕೆಂದು ಸೋನಿಗೆ ಆಫರ್ ನೀಡಿತ್ತು. ಆದರೆ, ಸೋನಿ ಸ್ಪೈಡರ್‌ಮ್ಯಾನ್ ಸಿನಿಮಾದ ಹಕ್ಕುಗಳನ್ನು ಮಾತ್ರ ತೆಗೆದುಕೊಂಡು, ಅವೆಂಜರ್ಸ್ ಸಿನಿಮಾಗಳನ್ನು ತಿರಸ್ಕರಿಸಿತು. ಆದರೆ, ಅವೆಂಜರ್ಸ್ ಸರಣಿಯ ಐರನ್ ಮ್ಯಾನ್ಮ, ಥೋರ್, ಕ್ಯಾಪ್ಟನ್ ಅಮೇರಿಕಾದಂತಹ ಸಿನಿಮಾಗಳನ್ನು ರಿಜೆಕ್ಟ್ ಮಾಡಿ ಕೈ ಕೈ ಹಿಸುಕಿಕೊಂಡಿತು. ಆ ಸಿನಿಮಾಗಳಿಗೆ ಮಾರ್ವೆಲ್ ಕಂಪನಿ 25 ಮಿಲಿಯನ್ ಡಾಲರ್ ಕೇಳಿತ್ತು. ಆದರೆ, ಸೋನಿ ಕೇವಲ ಸ್ಪೈಡರ್‌ಮ್ಯಾನ್‌ಗೆ 10 ಮಿಲಿಯನ್ ಡಾಲರ್ ಕೊಟ್ಟು ಖರೀದಿಸಿತ್ತು.

2. ಬ್ಲಾಕ್‌ಬಸ್ಟರ್‌ನಿಂದ ನೆಟ್‌ಫ್ಲಿಕ್ಸ್ ರಿಜೆಕ್ಟ್
90ರ ದಶಕದಲ್ಲಿಯೇ ಆಡ್‌ಆನ್ ಸೇವೆಗಳನ್ನು ನೀಡುತ್ತಿದ್ದ ಬ್ಲಾಕ್‌ಬಸ್ಟರ್‌ಗೆ 2000ನೇ ಇಸವಿಯಲ್ಲಿ ನೆಟ್‌ಫ್ಲಿಕ್ಸ್‌ನ್ನು 50 ಮಿಲಿಯನ್ ಡಾಲರ್‌ಗೆ ಖರೀದಿಸುವ ಅವಕಾಶವಿತ್ತು. ಆದರೆ, ಬ್ಲಾಕ್‌ಬಸ್ಟರ್ ಈ ಅವಕಾಶವನ್ನು ತಿರಸ್ಕಾರ ಮಾಡಿತ್ತು. ಆದರೆ, ಆನ್‌ಲೈನ್ ಜಗತ್ತು ಬೆಳೆದಂತೆಲ್ಲ ನೆಟ್‌ಫ್ಲಿಕ್ಸ್ ಬೃಹದಾಕಾರವಾಗಿ ಬೆಳೆದಿದ್ದು, ಸದ್ಯ 152 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ.

3. ಆಪಲ್ ಷೇರುಗಳನ್ನು ಮಾರಿದ್ದ ರೋನಾಲ್ಡ್ ವೇನ್
1976ರಲ್ಲಿ ಪ್ರಾರಂಭವಾದ ಆಪಲ್‌ನ ಮೂರನೇ ಹೂಡಿಕೆದಾರನಾಗಿದ್ದ ರೋನಾಲ್ಡ್ ವೇನ್, ಸ್ಟೀವ್ ಜಾಬ್ಸ್ ಮತ್ತು ವೋಜ್ನಾಯಿಕ್ ನಡುವಿನ ಸಮಸ್ಯೆಯಿಂದಾಗಿ ತಮ್ಮ ಶೇ.10ರಷ್ಟು ಷೇರುಗಳನ್ನು ವಾಪಸ್ ತೆಗೆದುಕೊಂಡರು. ಶೇ.10ರಷ್ಟು ಷೇರುಗಳ ಮೌಲ್ಯ ಅಂದು 800 ಡಾಲರ್ ಆಗಿತ್ತು. ಅದೇ ಶೇ.10ರಷ್ಟು ಷೇರುಗಳ ಮೌಲ್ಯ 92 ಬಿಲಿಯನ್ ಡಾಲರ್‌ಗೂ ಹೆಚ್ಚು ಎಂದರೆ ನಂಬಲೇಬೇಕು.

4. ಜೆರಾಕ್ಸ್ ಪರ್ಸನಲ್ ಕಂಪ್ಯೂಟರ್ ಸಂಶೋಧಿಸಿ, ಕೈ ಚೆಲ್ಲಿತು
1973ರಲ್ಲಿ ಜೆರಾಕ್ಸ್ ಕಂಪನಿ ಮೊದಲು ಕಂಪ್ಯೂಟರ್ ಮತ್ತು ಗ್ರಾಹಕರಿಗೆ ಅನುಕೂಲವಾಗುವ ಯಂತ್ರಗಳನ್ನು ತಯಾರಿಸುತ್ತಿತ್ತು. ಮೊದಲ ಆಧುನಿಕ ಪರ್ಸನಲ್ ಕಂಪ್ಯೂಟರ್‌ನ್ನು ಜೆರಾಕ್ಸ್ ಕಂಪನಿಯೇ ಅಭಿವೃದ್ಧಿಪಡಿಸಿದ್ದು, ಜೆರಾಕ್ಸ್ PARCನಲ್ಲಿ ಕಲಿಯಲು ಅವಕಾಶ ನೀಡಿತು. ಪಾರ್ಕ್‌ನಲ್ಲಿ ಕಲಿತ ಇಬ್ಬರು ತಮ್ಮದೇ ಕಂಪನಿಗಳನ್ನು ಪ್ರಾರಂಭಿಸಿ ಟೆಕ್ ಜಗತ್ತಿನಲ್ಲಿ ಪ್ರಮುಖರಾಗಿದ್ದಾರೆ. ಅವರೆಂದರೆ ಸ್ಟೀವ್ ಜಾಬ್ಸ್ ಮತ್ತು ಬಿಲ್‌ಗೇಟ್ಸ್. ಕಂಪ್ಯೂಟರ್ ಬಗ್ಗೆ ಕಲಿಸಿದ ಜೆರಾಕ್ಸ್ ಇಂದು ಕೇವಲ ಮುದ್ರಣ ಕ್ಷೇತ್ರಕ್ಕೆ ಮಾತ್ರ ಸಿಮೀತವಾಗಿದೆ.

5. ಗೂಗಲ್ ಖರೀದಿಸುವ ಅವಕಾಶ ಬಿಟ್ಟ ಯಾಹೂ
1998ರಲ್ಲಿ ಯಾಹೂಗೆ ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿನ್ ಗೂಗಲ್ ಸರ್ಚ್ ಇಂಜಿನ್‌ನ್ನು 1 ಮಿಲಿಯನ್ ಡಾಲರ್‌ಗೆ ಖರೀದಿಸುವಂತೆ ಆಫರ್ ಕೊಟ್ಟಿದ್ದರು. ಆದರೆ, ಯಾಹೂ ಅದನ್ನು ತಿರಸ್ಕರಿಸಿತ್ತು. 2002ರಲ್ಲಿ ಮತ್ತೆ ಯಾಹೂವಿಗೆ ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿನ್ 5 ಮಿಲಿಯನ್ ಡಾಲರ್‌ಗೆ ಖರೀದಿಸಲು ಆಫರ್ ನೀಡಿತ್ತು. ಆದರೆ, ಆಗಲೂ ಯಾಹೂ ಆಫರ್ ತಿರಸ್ಕರಿಸಿ ದೊಡ್ಡ ತಪ್ಪು ಮಾಡಿತು.

6. ಫೇಸ್‌ಬುಕ್ ಆಫರ್ ಬಿಟ್ಟ ವಯಾಕಾಮ್
2006ರಲ್ಲಿ ವಯಾಕಾಮ್ ಕಂಪನಿ ಫೇಸ್‌ಬುಕ್‌ನ್ನು ಖರೀದಿಸಲು 1.5 ಬಿಲಿಯನ್ ಡಾಲರ್‌ಗೆ ಮುಂದಾಗಿತ್ತು. ಆದರೆ, ಫೇಸ್‌ಬುಕ್‌ನ್ನು 2 ಬಿಲಿಯನ್ ಡಾಲರ್‌ಗಿಂತ ಕಡಿಮೆ ಮೊತ್ತಕ್ಕೆ ಮಾರದಿರಲು ಮಾರ್ಕ್ ಜುಕರ್‌ಬರ್ಗ್ ನಿರ್ಧರಿಸಿದ್ದರು. ದಶಕದ ನಂತರ ಟೆಕ್ ಜಗತ್ತಿನಲ್ಲಿ ಫೇಸ್‌ಬುಕ್ ದೊಡ್ಡ ಸಾಧನೆಯನ್ನೇ ಮಾಡಿದೆ.


Click it and Unblock the Notifications








