ವ್ಯಕ್ತಿಯೋರ್ವನ ಖಾತೆಯಲ್ಲಿದ್ದ 11.50 ಲಕ್ಷ ಖಾಲಿಯಾಗಿದ್ದು ಆತನಿಗೆ ಗೊತ್ತಿರಲಿಲ್ಲ!!
ಆನ್ಲೈನ್ನಲ್ಲಿ ನಡೆಯುವ ವಂಚನೆ ಪ್ರಕರಣಗಳಿಗೆ ತಕ್ಕ ಮಟ್ಟಿನ ಬ್ರೇಕ್ ಹಾಕಿದ್ದು ಒನ್ ಟೈಮ್ ಪಾಸ್ವರ್ಡ್(ಒಟಿಪಿ) ಎನ್ನಬಹುದು. ಈ ವ್ಯವಸ್ಥೆ ಜಾರಿಗೆ ಬಂದಮೇಲೆ ಸೈಬರ್ ಕ್ರೈಮ್ ಪ್ರಕರಣಗಳು ಇಳಿಕೆ ಕಂಡಿದ್ದು ನಿಜ. ಆದರೆ, ಡಿಜಿಟಲ್ ವೇದಿಕೆಯ ಬಳಕೆ ಹೆಚ್ಚಿದಂತೆ, ಕಳ್ಳರು ಹೆಚ್ಚೆಚ್ಚು ಬುದ್ಧಿ ಉಪಯೋಗಿಸುತ್ತಿದ್ದಾರೆ. ಇದಕ್ಕೆ ಹೊಸದೊಂದು ಕಳ್ಳಮಾರ್ಗ ಸೇರಿಕೊಂಡಿದೆ.
ದೆಹಲಿಯಲ್ಲಿ ಸೈಬರ್ ಕಳ್ಳರು ಇಂತಹ ಕುತಂತ್ರವೊಂದನ್ನು ಉಪಯೋಗಿಸಿ ಬರೋಬ್ಬರಿ 11.50 ಲಕ್ಷ ರೂ.ದೋಚಿದ ಘಟನೆ ನಡೆದಿದೆ. ಈ ಘಟನೆಯ ಬೆನ್ನತ್ತಿದ ಪೊಲೀಸರು ಇಂತಹ ಒಂದು ಕುತಂತ್ರವನ್ನು ಹೆದರಿದ್ದಾರೆ. ಪೊಲೀಸರು ತಿಳಿಸಿರುವಂತೆ, ಈಗ ಸೈಬರ್ ಜಾಲ ಸ್ಮಾರ್ಟ್ಫೋನ್ ಹ್ಯಾಕ್ ಮಾಡುವುದಲ್ಲದೆ, ಒಟಿಪಿಯನ್ನು ಸಹ ಕದಿಯುವ ಮಟ್ಟಕ್ಕೆ ಬೆಳದಿದೆಯಂತೆ.

ಯಾವುದೇ ವ್ಯಕ್ತಿಯ ಖಾಸಾಗಿ ಮಾಹಿತಿಗಳನ್ನು ಕದ್ದ ನಂತರ ಆತನ ಮೊಬೈಲ್‌ಗೆ ಬರುವ ಒಟಿಪಿ ಪಡೆದುಕೊಳ್ಳಲು ವಂಚಕರು ಹೊಸದಾರಿಯನ್ನು ಹುಡುಕಿಕೊಂಡಿದದ್ದಾರೆ. ಇದರಲ್ಲಿ ಬ್ಯಾಂಕ್ ಸಿಬ್ಬಂದಿಯ ಕೈವಾಡವೂ ಇದೆ ಎನ್ನುತ್ತಿದೆ ವರದಿ. ಹಾಗಾದರೆ, 11.50 ಲಕ್ಷ ರೂ. ವಂಚನೆ ನಡೆದದ್ದು ಹೇಗೆ? ಒಟಿಪಿ ಕದಿಯಲು ವಂಚಕರು ಮಾಡಿದ್ದೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

11.5 ಲಕ್ಷ ರೂ,ಗೆ ಪಂಗನಾಮ!
ದೆಹಲಿಯ ಮೂಲದ ವ್ಯಕ್ತಿಯೋರ್ವ ಯಾವುದೇ ಅರಿವಿಲ್ಲದಂತೆಯೇ ತನ್ನ ಬ್ಯಾಂಕ್ ಖಾತೆಯಲ್ಲಿದ್ದ 11.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದ. ನಗರದ ಅಶೋಕ್ ಹೋಟೆಲ್ ಬಳಿಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ತನ್ನ ಖಾತೆಯನ್ನು ಹೊಂದಿದ್ದಾಗಿ, ಯಾವುದೇ ವ್ಯವಹಾರಗಳನ್ನು ನಡೆಸದೇ ಇದ್ದರೂ ಖಾತೆಯಲ್ಲಿನ ಹಣ ಖಾಲಿಯಾಗಿದೆ ಎಂದು ದೂರು ದಾಖಲಿಸಿದ್ದ.

ವಂಚನೆಯ ಹಿಂದೆಬಿದ್ದ ಪೊಲೀಸರು!
ಯಾವುದೇ ವ್ಯವಹಾರಗಳನ್ನು ನಡೆಸದೇ ಇದ್ದರೂ, ಯಾರಿಗೂ ಒಟಿಪಿ ನೀಡದೇ ಇದ್ದರೂ ಸಹ ಆ ವ್ಯಕ್ತಿಯ ಬ್ಯಾಂಕ್ ಹಣ ಖಾಲಿಯಾಗಿದ್ದ ಪ್ರಕರಣದ ಹಿಂದೆ ಪೊಲೀಸರು ಬೆನ್ನುಬಿದ್ದರು. ವಂಚಕರು ಹೇಗೆಲ್ಲಾ ಹಣ ದೋಚಿರಬಹುದು ಎಂದು ತಡಕಾಡಿದಾಗ, ಮೊಬೈಲ್ ಒಟಿಪಿ ಬಳಸಿ ಆನ್‌ಲೈನ್ ಪಾವತಿಯ ಮೂಲಕ ವಂಚನೆ ನಡೆದಿರುವುದನ್ನು ಪೊಲೀಸರು ಕಂಡುಕೊಂಡರು.

ಎಲ್ಲಾ ಮಾಹಿತಿಯನ್ನು ಕದ್ದಿದ್ದರು!
ಯಾವುದೇ ವ್ಯವಹಾರಗಳನ್ನು ನಡೆಸದೇ ಇದ್ದರೂ ಖಾತೆಯಲ್ಲಿನ ಹಣ ಖಾಲಿಯಾಗಿದೆ ಎಂದು ದೂರು ದಾಖಲಿಸಿದ್ದ ವ್ಯಕ್ತಿಯ ದೂರು ನಿಜವಾಗಿತ್ತು. ದೂರು ನೀಡಿದ ವ್ಯಕ್ತಿಗೆ ತಿಳಿಯದಂತೆಯೇ ಆತನ ಖಾಸಾಗಿ ಮಾಹಿತಿ ಕದಿಯಲಾಗಿತ್ತು. ಕೆಲವೊಂದು ನಕಲಿ ವೆಬ್‌ಸೈಟ್‌ಗಳ ಮೂಲಕ ಅವರನ್ನು ಹ್ಯಾಕ್ ಮಾಡಿ, ನಂತರ ಹೊಸ ವಿಧಾನದಲ್ಲಿ ಆತನ ಒಟಿಪಿ ಮಾಹಿತಿ ಕದಿಯಲಾಗಿತ್ತು.

ಒಟಿಪಿಯನ್ನು ಬ್ಯಾಂಕ್ ಮೂಲಕವೇ ಪಡೆದರು!
ಡೆಬಿಟ್‌ಕಾರ್ಡಿನ ಎಲ್ಲಾ ಖಾಸಾಗಿ ಮಾಹಿತಿಯನ್ನು ಕದ್ದ ವಂಚಕರು ಅದರ ಮೂಲಕ ಆನ್‌ಲೈನ್ ವ್ಯವಹಾರ ನಡೆಸಲು ಶಕ್ತರಾಗಿದ್ದರು. ಆದರೆ, ಅವರಿಗೆ ಒಟಿಪಿ ಎಂಬ ತಡೆಗೋಡೆ ಇತ್ತು. ಇದಕ್ಕಾಗಿ, ಅವರು ಮಾಡಿದ್ದು ಬ್ಯಾಂಕ್ ಸಂಪರ್ಕವನ್ನು. ಖಾತೆದಾರರ ಹೆಸರನ್ನು ಹೇಳಿಕೊಂಡು ನಕಲಿ ದಾಖಲೆ ನೀಡಿ ತಮ್ಮ ಮೊಬೈಲ್ ಸಂಖ್ಯೆ ನೋಂದಣಿ ಮಾಡಿ ಬದಲಾಯಿಸಿ ಬಂದಿದ್ದರು.

11.50 ಲಕ್ಷ ರೂ. ಖೋತಾ!
ವಂಚಕರು ನೀಡಿದ ಮೊಬೈಲ್ ನಂಬರ್ ಅನ್ನು ಬ್ಯಾಂಕ್ನವರು ಖಾತೆಗೆ ಅಟ್ಯಾಚ್ ಆಗಿದ್ದ ಮೊಬೈಲ್ ಸಂಖ್ಯೆಯಾಗಿ ಬದಲಾಯಿಸಿದ ನಂತರ ವಂಚನೆ ನಡೆದಿದೆ. ಇದಾಗಿದ್ದೇ ತಡ ಖಾತೆಯಲ್ಲಿದ್ದ 11.50 ಲಕ್ಷ ರೂ. ಮೊತ್ತವನ್ನು ಆರು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದ ಹಣವನ್ನು ಎಟಿಎಂ ಹಾಗೂ ಚೆಕ್ ಬಳಸಿ ತೆಗೆಯಲಾಗಿದೆ.

ಬ್ಯಾಂಕ್ ಸಿಬ್ಬಂದಿಯ ಕೈವಾಡ?
ವಂಚಕನೋರ್ವ ‘ನಾನು ಇತ್ತೀಚೆಗೆ ಮೊಬೈಲ್ ಸಂಖ್ಯೆ ಬದಲಾಯಿಸಿದ್ದೇನೆ. ಹಣ ವರ್ಗಾವಣೆ ಮಾಡಲು ಒಟಿಪಿ ಅತ್ಯಗತ್ಯ. ಹಾಗಾಗಿ ಬ್ಯಾಂಕ್ಗೆ ಅಟ್ಯಾಚ್ ಆಗಿರುವ ಮೊಬೈಲ್ ಸಂಖ್ಯೆ ಬದಲಾಯಿಸಬೇಕು' ಎಂದು ಕೋರಿದ್ದ. ಇದಾದ ನಂತರ ಮೊಬೈಲ್ ಸಂಖ್ಯೆಯನ್ನು ಬದಲಿಸಿದ ಬ್ಯಾಂಕ್ ಸಿಬ್ಬಂದಿ ಸರಿಯಾಗಿ ಪರೀಶೀಲನೆ ನಡೆಸಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ.


Click it and Unblock the Notifications